ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮಾನ್ವಿತಾ 2 ದಿನಗಳ ನಂತರ ಉಸಿರು ಚೆಲ್ಲಿದ್ದಾಳೆ. ಏಕಾಏಕಿ ಏರಿದ ಡೆಂಗ್ಯೂ ಜ್ವರ, 48 ಗಂಟೆಗಳಲ್ಲೇ ಮಗು ದೂರವಾಗಿದ್ದಾಳೆ ಎಂದು ಆಕೆಯ ತಂದೆ ತಾಯಿ ಹೇಳಿದ್ದಾರೆ. ಮೃತಳ ಪೋಷಕರು ಬೆಂಗಳೂರಿನ ಮರಿಯಪ್ಪನಪಾಳ್ಯದಲ್ಲಿ ವಾಸವಾಗಿದ್ದು, ಆಕೆಯ ತಂದೆ ರವೀಂದ್ರ ಎಂಬುವರು ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದರು. ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ, ಒಂದೇ ವಾರದಲ್ಲಿ ಮೃತಪಟ್ಟವರಲ್ಲಿ ಮಾನ್ವಿತಾ ಎರಡನೆಯವಳು.
ಬಾಲಕಿ ಪೋಷಕರು ಮಗುವಿನ ಜೀವ ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ ಆಗಲಿಲ್ಲ. ಬಾಲಕಿಯ ತಾಯಿ ಸೆಪ್ಟೆಂಬರ್ 10 ರಂದು ಜ್ವರ ಬಂದಿದ್ದರಿಂದ ಮಗಳನ್ನು ಶಾಲೆಯಿಂದ ಮಧ್ಯಾಹ್ನ ಮನೆಗೆ ಕರೆತಂದಿದ್ದರು. ನಂತರ ಮಗಳಿಗೆ ಮನೆಯಲ್ಲೆ ಡೋಲೋ ಮಾತ್ರೆ ಕೊಟ್ಟು ಮಲಗಸಿದ್ದರು. ಆದರೂ ಜ್ವರ ಕಡಿಮೆ ಆಗಿರಲಿಲ್ಲ. ಜೊತೆಗೆ ತಲೆನೋವು ಬಂದಿತ್ತು. ಕೂಡಲೇ ಗಾಬರಿಯಿಂದ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಆದರೆ, ಅಲ್ಲಿ ವೈದ್ಯರು ತಪಾಸಣೆ ಮಾಡಿ ಔಷಧಿ ಕೊಟ್ಟು ಕಳಿಸಿದ್ದರು. ನಂತರ ಮಾನ್ವಿತಾ ಆ ದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದಾಳೆ.
ಆದರೆ, ಮರು ದಿನ ಹುಷಾರಾಗಿಯೇ ಇದ್ದ ಮಗಳಿಗೆ ಸಂಜೆ 7:45 ರ ವೇಳೆಗೆ ಇದ್ದಕ್ಕಿದಂತೆ ಚಳಿ, ವಾಂತಿ ಕಾಣಿಸಿಕೊಂಡಿದೆ. ಆಗ ಪೋಷಕರು ನಾಗರಬಾವಿ ಆಸ್ಪತ್ರೆಗೆ ರಾತ್ರಿ 9:30ರ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆ ಮಗುವಿಗೆ ಜ್ವರವು ಅತಿಯಾಗಿ ತಲೆಗೆ ಏರಿದ್ದರಿಂದ ಫಿಟ್ಸ್ ಬಂದಿತ್ತು. ನಂತರ ಪರೀಕ್ಷೆ ಮಾಡಿದಾಗ ಮಗುವಿಗೆ ಡೆಂಗ್ಯೂ ಎಂದು ತಿಳಿಯಿತು. ಆ ಸಮಯದಲ್ಲಿ ಪ್ಲೇಟ್‌ಲೆಟ್ 2.87 ಲಕ್ಷ ಇತ್ತು. ಹಾಗಾಗಿ ಅಪಾಯದ ಮುನ್ಸೂಚನೆ ಗೊತ್ತಾಗಲಿಲ್ಲ.
ನಂತರ ಮಗುವಿನ ಪರಿಸ್ಥಿತಿ ಗಂಭೀರವಾಗಿ ಹೋದಾಗ ಉಸಿರಾಡಲೂ ಕಷ್ಟವಾಯ್ತು. ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಯಿತು. ಮೆದುಳು 10% ಮಾತ್ರ ಸಕ್ರಿಯವಾಯಿತು. ವೈದ್ಯರು ಪೋಷಕರಿಗೆ ಮಗುವು ಉಳಿಯುವುದು ಕಡಿಮೆ ಸಾಧ್ಯತೆ ಇದೆ ಎಂದಾಗ ಪೋಷಕರಿಗೆ ಆತಂಕವಾಗುತ್ತದೆ. ವಿಷಯ ತಿಳಿದ ಪೋಷಕರು ಮಗುವನ್ನು ಆಂಬುಲೆನ್ಸ್ ಸಹಾಯದಿಂದ ಮತ್ತೊಂದು ಆಸ್ಪತ್ರೆಗೆ ಸೆ. 12 ರಂದು ಬೆಳಗ್ಗೆ 6 ಗಂಟೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಜ್ವರ ಮೆದುಳಿಗೆ ಏರಿರುವುದು ಗೊತ್ತಾಗಿದೆ. ಅಷ್ಟರಲ್ಲಿ ಮೆದುಳು ನಿಷ್ಕ್ರಿಯವಾಗಿತ್ತು. ಬಹುಅಂಗಾಂಗ ವೈಫಲ್ಯವೂ ಆಯಿತು. ಮಧ್ಯಾಹ್ನ 2.45 ಕ್ಕೆ ಪುಟ್ಟ ಮಗುವಿನ ಎದೆಬಡಿತವೂ ನಿಂತುಹೋಯಿತು.
Post a comment
Log in to write reviews