
ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಕಾಡಂಚಿನ ಗ್ರಾಮಗಳ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಗಡಿ ಗ್ರಾಮಗಳಾದ ಮದ್ದೂರು, ಮದ್ದೂರು ಕಾಲೋನಿ, ಕಗ್ಗಳದಹುಂಡಿ, ಬೇರಂಬಾಡಿ, ಬೀಚನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿನ ಮನೆಗಳಿಗೆ ಆರೋಗ್ಯ ಇಲಾಖೆ ತಂಡ ಭೇಟಿ ನೀಡುತ್ತಿದೆ. ಹಾಗೆಯೇ ವೆಸ್ಟ್ ನೈಲ್ ಸೋಂಕು ಜ್ವರದ ಬಗ್ಗೆ ತಪಾಸಣೆ ನಡೆಸಿ, ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದೆ.
ಬಿಗಿತ, ನಡುಕ, ಸೆಳೆತ ಮತ್ತು ಸ್ನಾಯು ದೌರ್ಬಲ್ಯ ಉಂಟಾದವರು ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಟಾಂಟಾಂ ಮಾಡಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ವೆಸ್ಟ್ ನೈಲ್ ಸೋಂಕಿಗೆ ಆತಂಕ ಪಡದೆ, ಮುಂಜಾಗ್ರತಾ ಕ್ರಮಗಳಿಂದ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಧೈರ್ಯ ತುಂಬುತ್ತಿದ್ದಾರೆ.
Poll (Public Option)

Post a comment
Log in to write reviews