ನ್ಯೂಯಾರ್ಕ್‌ನಲ್ಲಿ ಝೆಲನ್ಸ್ಕಿ- ಮೋದಿ ದ್ವಿಪಕ್ಷೀಯ ಮಾತುಕತೆ: ಯುದ್ಧದ ಕುರಿತು ತೀವ್ರ ಕಳವಳ ವ್ಯಕ್ತ

ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ಝೆಲನ್ಸ್ಕಿ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿ, ಯುದ್ಧದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಸಂಘರ್ಷ ಕೊನೆಗಾಣಿಸಲು ಎಲ್ಲ ರೀತಿಯ ಶಾಂತಿಯುತ ಪರಿಹಾರದ ಬದ್ಧತೆ ಮತ್ತು ತಮ್ಮ ಕೊಡುಗೆಗಳ ಕುರಿತು ಭರವಸೆ ನೀಡಿದರು ಎಂದು ವರದಿಯಾಗಿದೆ. ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷರ ಮನವಿಯ ಮೇರೆಗೆ ವಿಶ್ವಸಂಸ್ಥೆ ಶೃಂಗಸಭೆಯ ನಡುವೆ ಸೋಮವಾರ ಝೆಲನ್ಸ್ಕಿ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ. ಕಳೆದ ಆಗಸ್ಟ್ 23ರಂದು ಮೋದಿ ಉಕ್ರೇನ್ ರಾಜಧಾನಿ ಕೀವ್ಗೆ ಭೇಟಿ ನೀಡಿದ್ದರು. ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷರ ಆಹ್ವಾನದ ಮೇರೆಗೆ ಅವರು ಸಂಘರ್ಷಪೀಡಿತ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು.
ಝೆಲನ್ಸ್ಕಿ ಅವರೊಂದಿಗಿನ ಭೇಟಿಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, 'ಅಧ್ಯಕ್ಷ ಝೆಲನ್ಸ್ಕಿ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾದೆ. ಕಳೆದ ತಿಂಗಳು ಉಕ್ರೇನ್‌ನಲ್ಲಿ ತಿಳಿಸಿದಂತೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ನಾವು ಬದ್ಧ. ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಪರಿಹಾರ ನಿರ್ಣಯದ ಜೊತೆಗೆ ಶಾಂತಿ ಮತ್ತು ಸ್ಥಿರತೆಯ ಪುನರ್ಸ್ಥಾಪನೆಗೆ ಭಾರತ ಬೆಂಬಲ ನೀಡಲಿದೆ' ಎಂದು ಬರೆದುಕೊಂಡಿದ್ದಾರೆ.
ರಾಜತಾಂತ್ರಿಕತೆ ಮತ್ತು ಮಧ್ಯಸ್ಥಗಾರನಾಗಿ ಸಂಘರ್ಷಕ್ಕೆ ಶಾಂತಿಯುತ ನಿರ್ಣಯದ ಮೂಲಕ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಭಾರತ ಸ್ಪಷ್ಟ, ಸ್ಥಿರ ಮತ್ತು ರಚನಾತ್ಮಕ ವಿಧಾನದ ಮೂಲಕ ಕಾರ್ಯ ನಿರ್ವಹಿಸಲಿದೆ ಎಂದು ಮೋದಿ ಪುನರುಚ್ಛರಿಸಿದ್ದಾರೆ.
ಈ ಭೇಟಿ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ, ಅನೇಕ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಗೊಳಿಸಿ, ಒಟ್ಟಿಗೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ವಿಶ್ವಸಂಸ್ಥೆ, ಜಿ20 ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಸಂವಹನ ವೃದ್ಧಿಸುವುದು, ಎರಡನೇ ಶಾಂತಿ ಶೃಂಗಸಭೆಗಾಗಿ ಶಾಂತಿ ಸೂತ್ರವನ್ನು ಅನುಷ್ಠಾನಗೊಳಿಸುವುದು ನಮ್ಮ ಮಾತುಕತೆಯ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ಕಾಳಜಿಯನ್ನು ಶ್ಲಾಘಿಸಿದ ಝೆಲನ್ಸ್ಕಿ, ಸಂಘರ್ಷದಿಂದ ಹೊರಬರುವ ಮಾರ್ಗ ಹುಡುಕುತ್ತಿರುವ ಪ್ರಧಾನಿ ಮೋದಿ ಅವರ ಪ್ರಯತ್ನಕ್ಕೆ ಧನ್ಯವಾದ ತಿಳಿಸಿದ್ದಾರೆ ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews