ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮುಂದಿರೋ ಸವಾಲುಗಳೇನು..? ಸಕ್ಕರೆನಾಡಿಗೆ ಸಿಹಿ ನೀಡ್ತಾರಾ..!
ಬೆಂಗಳೂರು : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭಾರೀ ಕೈಗಾರಿಕೆಗಳ ಹಾಗೂ ಉಕ್ಕು ಸಚಿವಾಲಯಗಳ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಮಂಡ್ಯ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಹತ್ತಾರು ಸವಾಲುಗಳು ಎದುರಾಗಿವೆ. ಅವರ ಮೇಲೆ ಸಕ್ಕರೆನಾಡಿನ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮುಖ್ಯವಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ನಂತರ ಕಾವೇರಿ ಸಮಸ್ಯೆಗೆ ಶಾಶ್ವತ ಸಂಧಾನ ಸೂತ್ರ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮರುಜೀವ ದೊರಕುವ ಸಾಧ್ಯತೆಗಳಿವೆ. ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ಮಹತ್ವದ್ದಾಗಲಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದರೆ ಈ ಪಕ್ಷಗಳ ನಾಯಕರು ಕಾವೇರಿ ವಿವಾದದ ಕುರಿತು ಯಾವುದೇ ನಿರ್ಣಯಕ್ಕೆ ಬರುತ್ತಿಲ್ಲ. ಇದೀಗ ಎಚ್.ಡಿ. ಕುಮಾರಸ್ವಾಮಿ ಅವರ ಕೇಂದ್ರ ಸಚಿವರಾಗಿರುವುದರಿಂದ ಅವರ ಪ್ರಭಾವ ಬಳಿಸಿ, ಸಮಸ್ಯೆಗೆ ಪರಿಹಾರ ನೀಡಬೇಕಾದ ಜವಾಬ್ದಾರಿ ಅವರ ಮೇಲಿದ್ದರೆ, ಅದಕ್ಕೆ ಬೇಕಾದ ನೆರವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಬೇಕಿದೆ.
ಇನ್ನು ಕೇಂದ್ರ ಸರಕಾರದಿಂದ ‘ಒಂದು ಜಿಲ್ಲೆ-ಒಂದು ಉತ್ಪನ್’ಯೋಜನೆಗೆ ಮಂಡ್ಯದ ನೈಸರ್ಗಿಕ ಬೆಲ್ಲ ಆಯ್ಕೆಯಾಗಿದೆ. ಆದರೆ ಸಕ್ಕರೆನಾಡು ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯದಲ್ಲಿ ಕಬ್ಬಿನ ಇಳುವರಿ ಹಾಗೂ ಉತ್ಪಾದನೆ ಕುಸಿಯುತ್ತಿದೆ. ಇದಕ್ಕೆ ಮುಖ್ಯಕಾರಣ ನೀರಿನ ಸಮಸ್ಯೆ. ಕೆಆರ್ಎಸ್ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಾವೇರಿ ನಿರ್ವಹಣಾ ಮಂಡಳಿ, ಕಾವೇರಿ ನದಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ರೈತರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಕೇಂದ್ರದ ಮಧ್ಯಸ್ಥಿಕೆಯಲ್ಲಿಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಿದರೆ, ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಆದರೆ ಇದಕ್ಕೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ.
ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿವೆ. ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಆಧಾರಿತ ಕೈಗಾರಿಕೆಗಳನ್ನು ತಂದು ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸಬೇಕಿದೆ. ಇನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲಕ ಚಾಮರಾಜನಗರ-ಬೆಂಗಳೂರು ರೈಲು ಮಾರ್ಗ ಅನುಷ್ಠಾನಗೊಳಿಸಬೇಕೆಂಬುದು ಬಹುದಿನಗಳ ಬೇಡಿಕೆಯಿದೆ. ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ, ಪ್ರವಾಸೋದ್ಯಮ ಕೇಂದ್ರಗಳ ಸಕ್ರ್ಯೂಟ್ ನಿರ್ಮಾಣ, ಶ್ರವಣಬೆಳಗೊಳ-ಕೆಆರ್.ಪೇಟೆ-ಪಾಂಡವಪುರ-ಮಂಡ್ಯ ರಸ್ತೆಯ ಅಭಿವೃದ್ಧಿ, ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ನೆರವು, ಕೋಲ್ಡ ಸ್ಟೋರೇಜ್ ಘಟಕಗಳ ನಿರ್ಮಾಣ, ರಾಗಿ ಸಂಶೋಧನೆಗೆ ಉತ್ತೇಜನ, ವಿಸಿ ಫಾರಂ ಅಭಿವೃದ್ದಿಗೆ ಸೇರಿದಂತೆ ಅನೇಕ ಸವಾಲುಗಳು ಎಚ್.ಡಿ. ಕುಮಾರಸ್ವಾಮಿ ಅವರ ಮುಂದಿವೆ.
Post a comment
Log in to write reviews