
ಬೆಂಗಳೂರು: ಜನರ ಆಶೀರ್ವಾದ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರ ಪರಿಶ್ರಮದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದೇವೆಯೇ ಹೊರತು, ಶತ್ರು ಭೈರವಿ ಯಾಗ ಮಾಡಿ ಅಲ್ಲ ಎಂದು ನೂತನ ಸಂಸದ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ಲೋಕಸಭೆ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.
ನಾವು ಯಾವುದೇ ಕುರಿ, ಮೇಕೆ, ಎಮ್ಮೆ ಕಡಿದು ಗೆದ್ದಿಲ್ಲ. ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ ಎಂದರು.
ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಸೋಲುವುದೂ ಅಷ್ಟೇ ಸತ್ಯ ಎಂದು ಮಂಡ್ಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು.
ಈಗ ಅವರ ಪ್ರಕಾರ ಸೂರ್ಯ ಹುಟ್ಟುತ್ತಾನೋ ಇಲ್ಲವೋ ನೋಡೋಣ ಎಂದು ಕುಟುಕಿದರು.
ಮಂಡ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿ ಅಧಿಕಾರ ದುರುಪಯೋಗ ಮಾಡಿಕೊಂಡರು ಜನರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪ್ರೀತಿ, ವಿಶ್ವಾಸಕ್ಕೆ ಮನ್ನಣೆ ನೀಡಿದ್ದಾರೆ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಮಂಡ್ಯ ಯಾವತ್ತೂ ನನ್ನ ಕೈ ಬಿಡಲ್ಲ, ಬಿಡುವುದೂ ಇಲ್ಲ ಎಂದರು.
Poll (Public Option)

Post a comment
Log in to write reviews