ಮುಡಾ ಹಗರಣದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ವಿಶ್ವನಾಥ್: ಕುತೂಹಲ ಮೂಡಿಸಿದ ನಾಯಕರ ಮಾತುಕತೆ
ಬೆಂಗಳೂರು: ಮುಡಾ ಹಗರಣ ಪ್ರಕರಣ ಸಂಬಂಧ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರೆದಿರುವ ನಡುವಲ್ಲೇ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ್ದು, ನಾಯಕರ ಮಾತುಕತೆ ಕುತೂಹಲ ಕೆರಳಿಸಿದೆ.
ವಿಶ್ವನಾಥ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಈ ಹಿಂದೆ ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಮುಡಾ ಹಗರಣವನ್ನು ಬಯಲು ಮಾಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ಮೈಸೂರು ಸಂಸದೀಯ ಸ್ಥಾನಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಶ್ವನಾಥ್ ಅವರು, ಇದ್ದಕ್ಕಿಂದ್ದಂತೆ ಮುಡಾ ಹಗರಣವನ್ನು ಬಹಿರಂಗಪಡಿಸಿದ್ದರು. ಇದರ ಹಿಂದಿನ ಕಾರಣ ಕೂಡ ಕುತೂಹಲವನ್ನು ಮೂಡಿಸಿದೆ.
ಟಿಕೆಟ್ ಸಂಬಂಧ ವಿಶ್ವನಾಥ್ ಅವರು ಹಲವು ಬಾರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದ್ದರು. ಆದರೂ ವಿಶ್ವನಾಥ್ ಅವರನ್ನು ಮೈಸೂರು ಲೋಕಸಭಾ ಸ್ಥಾನಕ್ಕೆ ಪರಿಗಣಿಸಿರಲಿಲ್ಲ. ಇದರಿಂದ ಅಸಮಾಧಾನದಲ್ಲಿದ್ದ ವಿಶ್ವನಾಥ್ ಅವರು ಮುಡಾ ಹಗರಣವನ್ನು ಬಹಿರಂಗಪಡಿಸಿರಬಹುದು ಎಂದು ಹೇಳಲಾಗುತ್ತಿದೆ.
Post a comment
Log in to write reviews