ನವದೆಹಲಿ: ಪ್ರಮುಖ ನಗರಗಳ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ ಇರುವುದರಿಂದ ಟ್ರಾಫಿಕ್ ಕಿರಿಕಿರಿ ಸಮಸ್ಯೆಯಾಗಿ ಕಾಡ್ತಿದೆ. ಜೊತೆಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು, ಯದ್ವಾತದ್ವಾ ವಾಹನ ಚಲಾಯಿಸುವವರು, ಮೊಬೈಲ್ ಬಳಸಿಕೊಂಡು ವಾಹನ ಚಲಾಯಿಸುವವರು ಸೇರಿದಂತೆ ನಾನಾ ರೀತಿಯಲ್ಲಿ ಕಿರಿಕಿರಿ ತರುತ್ತಾರೆ. ಕೆಲಸ ಮಾಡಿ ಸುಸ್ತಾಗಿ ಮನೆಗೆ ಹಿಂತಿರುಗುವ ಜನರು ಟ್ರಾಫಿಕ್ ಮೂಲಕ ಮನೆ ತಲುಪುವಷ್ಟರಲ್ಲಿ ಹೈರಾಣಾಗಿರುತ್ತಾರೆ. ಈ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಕಡಿವಾಣ ಹಾಕಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹೊಸ ಐಡಿಯಾ ಪ್ರಸ್ತಾಪಿಸಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಾಹನ ವಿಮೆಯ ಪ್ರೀಮಿಯಮ್ ಹಣ ಹೆಚ್ಚಿಸಬೇಕು ಎನ್ನುವ ಸಲಹೆಯನ್ನು ಅವರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವುದು ತಿಳಿದುಬಂದಿದೆ.
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರರಿಗೆ ಆ ಕಾರ್ಯಕ್ಕೆ ದಂಡ ವಿಧಿಸುವ ಟ್ರಾಫಿಕ್ ಚಲನ್ ನೀಡುವುದರ ಜೊತೆಗೆ ಅಧಿಕ ಇನ್ಷೂರೆನ್ಸ್ ಪ್ರೀಮಿಯಮ್ ದಾಖಲು ಮಾಡಬೇಕು. ಟ್ರಾಫಿಕ್ ನಿಯಮ ಉಲ್ಲಂಘನೆಗಳ ಸಂಖ್ಯೆಗೆ ಅನುಗುಣವಾಗಿ ಇನ್ಷೂರೆನ್ಸ್ ಪ್ರೀಮಿಯಮ್ ಹಣ ಹೆಚ್ಚಿಸಬೇಕು. ಆ ರೀತಿಯಲ್ಲಿ ಲಿಂಕ್ ಮಾಡಲು ಸಾಧ್ಯವಾ ಎಂದು ಪರಿಶೀಲಿಸಿ ಎಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಮನವಿ ಮಾಡಿದ್ದಾರೆ.
ವಿ.ಕೆ. ಸಕ್ಸೇನಾ ಪ್ರಕಾರ, ಇನ್ಷೂರೆನ್ಸ್ ಪ್ರೀಮಿಯಮ್ ಹಣ ಹೆಚ್ಚಿಸುವ ಈ ಕ್ರಮವು ವಾಹನ ಸವಾರರಿಗೆ ಪಾಠವಾಗಬಹುದು. ಜವಾಬ್ದಾರಿಯುತವಾಗಿ ವಾಹನ ಚಲಾಯಿಸುವಂತೆ ಮಾಡಬಹುದು. ಇದರಿಂದ ವಾಹನ ಸವಾರರೂ ಸುರಕ್ಷಿತವಾಗಿರಬಹುದು, ಇತರ ಸವಾರರೂ ಸುರಕ್ಷಿತವಾಗಿರಬಹುದು ಎನ್ನುವುದು ಇದರ ಉದ್ದೇಶವಾಗಿದೆ.
Post a comment
Log in to write reviews