ವಿನಯ್ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಪೆಪೆ’ ಚಿತ್ರ ಆ.30ರಂದು ರಾಜ್ಯಾದ್ಯಂತ ರಿಲೀಸ್..!

ದೊಡ್ಮನೆ ಕುಡಿ ವಿನಯ್ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಪೆಪೆ’ ಆ.30ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಶ್ರೀಲೇಶ್ ನಾಯರ್ ನಿರ್ದೇಶನದ ಪೆಪೆ ಸಿನಿಮಾ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಟ್ರೇಲರ್ ನೋಡಿದ ಸಿನಿಪ್ರಿಯರು ಪೆಪೆ ಸಿನಿಮಾದ ಫಸ್ಟ್ ಶೋ ನೋಡಲು ಕಾತುರದಿಂದ ಕಾಯ್ತಿದ್ದಾರೆ.
ಸಿದ್ಧಾರ್ಥನಾಗಿ ಸ್ಯಾಂಡಲ್ವುಡ್ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್ಗೂ ಜೈ ಅನ್ನೋದು ಪಕ್ಕ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ.
ಮಲೆನಾಡ ಭಾಗದ ಹಳ್ಳಿಯೊಂದರಲ್ಲಿ ಪೆಪೆ ಸಿನಿಮಾದ ಕಥೆ ಸಾಗಲಿದ್ದು, ಜಾತಿ, ರಾಜಕೀಯ, ಸೇಡಿನ ಕಥೆಯನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆ ಇದಾಗಿದ್ದು, ಚಿತ್ರದಲ್ಲಿ ವಿನಯ್ ಮೊದಲ ಬಾರಿಗೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಜಲ್ ಕುಂದರ್, ಮಯೂರ್ ಪಟೇಲ್, ಯಶ್ ಶೆಟ್ಟಿ, ಅರುಣ ಬಾಲರಾಜ್, ನವೀನ್ ಡಿ ಪಡೀಲ್, ಮೇದನಿ ಕೆಳಮನೆ, ಶಶಿಧರ್ ಭಟ್, ಸಂಧ್ಯಾ ಅರಕೆರೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನ ಮ್ಯೂಸಿಕ್ ಮಾಡಿರೋದು ವಿಶೇಷವಾಗಿದೆ.
Poll (Public Option)

Post a comment
Log in to write reviews