ಕೊಡಗು, ಮಲೆನಾಡು, ಕರಾವಳಿ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಮಳೆ ಅವಾಂತರಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಶಾಲೆಯ ಕಂಪೌಂಡ್ ಗೋಡೆ ಕುಸಿದು 3ನೇ ತರಗತಿಯ ಬಾಲಕಿ ಅಸುನೀಗಿದ್ದಾರೆ. ಮತ್ತು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಹರೇಕಳ ನ್ಯೂಪಡ್ಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಗೋಡೆ ಕುಸಿದಿದೆ. ಈ ವೇಳೆ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುತ್ತಿದ್ದ 3ನೇ ತರಗತಿ ವಿದ್ಯಾರ್ಥಿನಿ 7 ವರ್ಷದ ಶಾಝಿಯಾ ಬಾನು ಮೃತಪಟ್ಟಿದ್ದಾಳೆ. ಇದೇ ಸಮಯಕ್ಕೆ ಕುಕ್ಕೆ ಸುಬ್ರಮಣ್ಯದಲ್ಲಿ ಕಬ್ಬಿಣ ಹಿಡಿದ ಜನರಿಗೆ ಸಿಡಿಲ ಶಾಕ್ ತಗುಲಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಕಂಡು ಬಂದಿದ್ದು, ಮುಂದಿನ 2 ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಹೊಂಗೆ ಹಳ್ಳ ಉಕ್ಕಿ ಹರಿಯುತ್ತಿದೆ. ಅಜ್ಜಂಪುರ ತಾಲೂಕಿನ ಐತಿಹಾಸಿಕ ಶಿವನಿ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದೆ. ಹೊಳೆಹೊನ್ನೂರಿನಲ್ಲಿ ತಗ್ಗು ಪ್ರದೇಶದ ಕಟ್ಟಡಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಕಡೂರು ಪಟ್ಟಣದ ಹಳೆಪೇಟೆಯಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ, 48 ವರ್ಷದ ಕೆ.ಎಚ್.ರಂಗಪ್ಪ ಎಂಬುವರು ಅಸುನೀಗಿದ್ದಾರೆ. ಶಿವಮೊಗ್ಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯರು ಪರದಾಡುವಂತಾಯಿತು.
ಕೊಡಗಿನಲ್ಲಿಯೂ ಮಳೆ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣ ಕಂಡು ಬಂತು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಇಳ್ಳೇನಹಳ್ಳಿಯಲ್ಲಿ ಸಿಡಿಲಿಗೆ ಹಸುವೊಂದು ಮೃತಪಟ್ಟಿದೆ. ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿಯೂ ಮಳೆಯಾಗಿದ್ದು, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಟಿ.ಕಲ್ಲಹಳ್ಳಿಯಲ್ಲಿ ಚಪ್ಪರ ಮುರಿದು 8 ಕುರಿಗಳು ಮೃತಪಟ್ಟಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ದೇವನಹಳ್ಳಿಯಲ್ಲಿ ತಗ್ಗು ಪ್ರದೇಶದ ಮನೆ, ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆಗೆ ನೀರು ನುಗ್ಗಿದೆ. ಮೈಸೂರು ಹಾಗೂ ತುಮಕೂರಿನಲ್ಲಿಯೂ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ.
Post a comment
Log in to write reviews