ವಾಲ್ಮಿಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ ಮತ್ತೆ ಇಡಿ ದಾಳಿ

ಬಳ್ಳಾರಿ :ವಾಲ್ಮಿಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ವಿವಿಧೆಡೆ ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ ಮತ್ತೊಮ್ಮೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಾಗೇಂದ್ರ ಸಂಬಂಧಿ ಎರ್ರಿಸ್ವಾಮಿ ಮನೆ ಸೇರಿದಂತೆ ಕೆಲ ಆಪ್ತ ಸಹಾಯಕರು ಮತ್ತು ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಇಡಿ ಜಾರ್ಜ್ಶೀಟ್ ಸಲ್ಲಿಕೆಗೆ ಸಮಯ ಹತ್ತಿರ ಬಂದಿರುವುದರಿಂದ ಅಧಿಕಾರಿಗಳು ದಾಳಿ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.
ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಕಳೆದ ತಿಂಗಳಷ್ಟೇ ಬೆಂಗಳೂರು, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದರು. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಗಸನಗೌಡ ದದ್ದಲ್ (ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ) ನಿವಾಸ, ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ (ಮಾಜಿ ಸಚಿವ) ಮನೆ ಮೇಲೂ ದಾಳಿ ನಡೆಸಿದ್ದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಿ.ನಾಗೇಂದ್ರ ಫ್ಲ್ಯಾಟ್ ಸೇರಿದಂತೆ ಏಕಕಾಲಕ್ಕೆ 18 ಕಡೆ ದಾಳಿ ನಡೆದಿತ್ತು. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಕಚೇರಿಯನ್ನೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಏನಿದು ವಾಲ್ಮೀಕಿ ನಿಗಮ ಹಗರಣ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸು ವಂಚನೆ ಪ್ರಕರಣವಾಗಿದೆ. ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಯ ನಂತರ ಹಗರಣ ಬೆಳಕಿಗೆ ಬಂದಿತ್ತು. ಚಂದ್ರಶೇಖರನ್ ಡೆತ್ನೋಟ್ನಲ್ಲಿ ಭ್ರಷ್ಟಾಚಾರ ಸಂಬಂಧಿತ ಮಾಹಿತಿಗಳು ಹಾಗೂ ಹಲವಾರು ಅಧಿಕಾರಿಗಳ ಹೆಸರು ಉಲ್ಲೇಖವಾಗಿತ್ತು.
ಹಗರಣವು ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ. ಸದ್ಯ ಎಸ್ಐಟಿ, ಇಡಿ ಹಾಗೂ ಸಿಬಿಐ ಕೂಡ ಪ್ರಕರಣದ ತನಿಖೆ ನಡೆಸುತ್ತಿವೆ. ಎಸ್ಐಟಿ ಈಗಾಗಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ದದ್ದಲ್ ಹಾಗೂ ನಾಗೇಂದ್ರ ಹೆಸರನ್ನು ಉಲ್ಲೇಖಿಸಿಲ್ಲ.
Poll (Public Option)

Post a comment
Log in to write reviews