ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು 2 ವರ್ಷಗಳಲ್ಲಿ ಭರ್ತಿ ಮಾಡುತ್ತೇವೆ: ದಿನೇಶ್ ಗುಂಡುರಾವ್

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹೀಗಾಗಿ 2 ವರ್ಷಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.
ಇನ್ಸ್ಪೆಕ್ಷನ್ ಆಫೀಸರ್, ಪಿಹೆಚ್ಸಿಗಳಲ್ಲಿ ಸಿಬ್ಬಂದಿ ಸೇರಿದಂತೆ ಇನ್ನೂ ಹಲವು ಹುದ್ದೆಗಳು ಖಾಲಿ ಇವೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಗಮನಹರಿಸುತ್ತೇವೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಿಎಂ ಗಮನಕ್ಕೆ ತಂದು 2 ವರ್ಷಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತೇವೆ ಎಂದರು. ಇದೇ ವೇಳೆ ಇಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು, ಆ ಅಧಿಕಾರಿ ಯಾರು, ಏನು ಅಂತಾ ನಮಗೆ ಗೊತ್ತಿಲ್ಲ. ಅಧಿಕಾರಿ ಕಲ್ಲೇಶ್ರನ್ನು ಇಡಿ ಅಧಿಕಾರಿಗಳೇ ಕರೆಸಿಕೊಂಡಿದ್ದಾರೆ. ಆ ಅಧಿಕಾರಿ ಭ್ರಷ್ಟಾಚಾರ ಮಾಡಿದ್ದಾರೋ ಇಲ್ವೋ ಬೇರೆ ವಿಚಾರ. ಮೊನ್ನೆ ದೂರು ಕೊಡುವ ಮೊದಲೇ ಇಡಿ ಏನು ಅಂತ ಹೇಳಿದ್ದೀವಿ. ಇಡಿಯವರು ಹಲವರಿಗೆ ಒತ್ತಡ ಹಾಕಿದ್ದಾರೆ, ನಮ್ಮ ಬಳಿ ಮಾಹಿತಿ ಇದೆ ಎಂದರು.
ಸಿಎಂ, ಮಂತ್ರಿಗಳ ಹೆಸರು ಹೇಳುವಂತೆ ಒತ್ತಡಹಾಕಿ ಸಿಲುಕಿಸಲು ಯತ್ನ ನಡೆದಿದೆ. ಬೇರೆಯವರ ಮೇಲೂ ಒತ್ತಡ ಹಾಕಲಾಗಿದೆ, ಯಾರೂ ದೂರು ಕೊಟ್ಟಿಲ್ಲ. ವಿಪಕ್ಷಗಳು ಏನಾದರೂ ಹೇಳಿಕೊಳ್ಳಲಿ, ಇಡಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಡಿ ಅಧಿಕಾರಿಗಳು ಬಿಜೆಪಿ ಪರ ಇದ್ದಾರೆ. ಸಿಬಿಐ, ಎಸ್ಐಟಿ ಇರುವಾಗ ಇಡಿ ಬರುವ ಅವಶ್ಯಕತೆ ಏನಿತ್ತು? ನಾಗೇಂದ್ರ ಹೆಸರು ಸಿಬಿಐ ಹಾಗೂ ಎಸ್ಐಟಿನಲ್ಲಿ ಎಲ್ಲೂ ಇರಲಿಲ್ಲ. ಇಡಿ ಅಧಿಕಾರಿಗಳು ನೇರವಾಗಿ ಬಂದು ನಾಗೇಂದ್ರರನ್ನು ಬಂಧಿಸಿದ್ರು. ಇಡಿ ಅಧಿಕಾರಿಗಳು ದೇಶಾದ್ಯಂತ ಅನಾಹುತ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
FIRಗೆ ಹೈಕೋರ್ಟ್ ತಡೆ ನೀಡಲು ತಾಂತ್ರಿಕ ಕಾರಣಗಳಿರಬಹುದು. ಅಧಿಕಾರಿ ಠಾಣೆಗೆ ಬಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಮಗೆ ಆದಂತಹ ಘಟನೆ ಆಧಾರದ ಮೇಲೆ ದೂರು ಕೊಟ್ಟಿದ್ದಾರೆ. ಇಡಿ ಅಧಿಕಾರಿಗಳು ಬಂದಿರುವ ಉದ್ದೇಶ ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರವನ್ನ ತೆಗೆಯಬೇಕು, ಸಿಎಂ ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಹೇಗಾದ್ರೂ ಮಾಡಿ ಕಾಂಗ್ರೆಸ್ ಸರ್ಕಾರ ತೆಗೆಯಬೇಕೆಂಬ ಉದ್ದೇಶವಿದೆ. ದೇಶದ ಹಲವೆಡೆ ಇಡಿ ಬಿಜೆಪಿಯ ಅಂಗಸಂಸ್ಥೆಯಾಗಿ ಕೆಲಸ ಮಾಡ್ತಿದೆ. ಇದು ಬಹಳ ದೊಡ್ಡ ವಿಷಯ, ನಮ್ಮ ಹೋರಾಟ ನಿರಂತರವಾಗಿರುತ್ತೆ ಎಂದರು.
Poll (Public Option)

Post a comment
Log in to write reviews