
ಮಂಡ್ಯ: ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿಕೊಂಡು ಗದ್ದೆಗಿಳಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭತ್ತದ ಪೈರು ನಾಟಿ ಮಾಡುವ ಮೂಲಕ ರೈತರ ಸಂಭ್ರಮದಲ್ಲಿ ಭಾಗಿಯಾದರು. ಅದಕ್ಕೂ ಮುನ್ನ ಕಾವೇರಿ ತಾಯಿಗೆ ಹಾಗೂ ಭತ್ತದ ರಾಶಿಗೆ ಪೂಜೆ ನೆರವೇರಿಸಿದರು.
ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಭತ್ತ ನಾಟಿ ಕಾರ್ಯಕ್ರಮ ನೆರವೇರಿತು. ರೈತರೊಂದಿಗೆ ಬೆರೆತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಗದ್ದೆಗಿಳಿದು ಭತ್ತದ ನಾಟಿ ಮಾಡಿರುವೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲೂ ಭತ್ತದ ನಾಟಿ ಮಾಡಿದ್ದು, ಉತ್ತಮ ಇಳುವರಿ ಬಂದಿದ್ದರ ಬಗ್ಗೆ ಮೆಲುಕು ಹಾಕಿದರು. ಭತ್ತದ ನಾಟಿ ಬಳಿಕ ಕುಮಾರಸ್ವಾಮಿ ಮಾತನಾಡಿದರು. ''ಭೂಮಿ ತಾಯಿಯೇ ನಮ್ಮ ರೈತನಿಗೆ ಮೂಲ ಆಧಾರ. ಈಗ ಕೆಆರ್‌ಎಸ್ ಡ್ಯಾಂ ಸಂಪೂರ್ಣವಾಗಿ ತುಂಬಿದೆ. ನಮ್ಮ ರೈತರು ಸಂತಸದಿಂದ ಭತ್ತದ ನಾಟಿ ಮಾಡುತ್ತಿದ್ದಾರೆ. 2018ರಲ್ಲಿ ಸಿಎಂ ಆಗಿದ್ದಾಗ ಭತ್ತದ ನಾಟಿಗೆ ಬಂದಿದ್ದೆ. ಇಂದು ಮಂಡ್ಯ ಜನರ ಆಶೀರ್ವಾದದ ಬಲದಿಂದ ಕೇಂದ್ರ ಸಚಿವನಾಗಿ ಬಂದಿದ್ದೇನೆ. ಹಳ್ಳಿಯ ತಾಯಂದಿರ ಜೊತೆಗೂಡಿ ಭತ್ತದ ಪೈರು ನಾಟಿ ಮಾಡಿರುವೆ'' ಎಂದರು.
''ನನ್ನ ಅಭಿವೃದ್ಧಿ ಕಲ್ಪನೆಯೇ ಬೇರೆ. ನನಗೆ 5 ವರ್ಷ ಅಧಿಕಾರ ಕೊಟ್ಟಿದ್ದರೆ, ನನ್ನ ಕೆಲಸದ ಯೋಜನೆಯೇ ಬೇರೆ ಇತ್ತು. ನಾನು ಮಣ್ಣಿಗೆ ಹೋಗುವ ಮುನ್ನ ಮಂಡ್ಯ ಜಿಲ್ಲೆಗೆ ಒಂದು ಕಾರ್ಖಾನೆ ತರುತ್ತೇನೆ ಎಂಬ ಮಾತು ಕೊಡುತ್ತೇನೆ. ಯುವಕ-ಯುವತಿಯರಿಗೆ ಕೆಲಸ ಕೊಡಿಸುವ ಕೆಲಸ ಮಾಡುತ್ತೇನೆ. ನಿಮ್ಮ ಬದುಕು ಸರಿಪಡಿಸಲು ಭಗವಂತ ಮೂರನೇ ಜನ್ಮ ಕೂಟ್ಟಿದ್ದಾನೆ. ಮುಂದೆ ನನಗೆ ಜನರು ಐದು ವರ್ಷದ ಸರಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ'' ಎಂದು ಹೇಳಿದರು.
Poll (Public Option)

Post a comment
Log in to write reviews