
ತ್ರಿಶೂರ್ (ಕೇರಳ): ರಷ್ಯಾ ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ದಾಳಿಯಲ್ಲಿ ಉದ್ಯೋಗ ಅರಸಿ ರಷ್ಯಾಕ್ಕೆ ತೆರಳಿದ್ದ ಕೇರಳದ ವ್ಯಕ್ತಿ ಸಾವನ್ನಪ್ಪಿದ್ದಾರೆ. ರಷ್ಯಾ ಸೇನೆ ವಿರುದ್ಧ ಉಕ್ರೇನ್ ನಡೆಸಿದ ದಾಳಿಗೆ ತ್ರಿಶೂರ್ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಮೃತನ ಸಂಬಂಧಿಕರಿಗೆ ತಿಳಿದು ಬಂದಿದೆ. ಕೇರಳದ ಕಲ್ಲೂರು ನೈರಂಗಡಿ ನಿವಾಸಿ ಸಂದೀಪ್ (36) ಮೃತ ವ್ಯಕ್ತಿ. ಸಂದೀಪ್ ಅವರ ಇದ್ದಂತಹ ರಷ್ಯಾದ ಸೇನಾ ಘಟಕವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಸೇನೆಯು ದಾಳಿ ನಡೆಸಿದೆ. ಸಂದೀಪ್ ಸಾವಿನ ಮಾಹಿತಿಯು ರಷ್ಯಾದ ಮಲಯಾಳಿ ಸಂಘಟನೆಗಳ ವಾಟ್ಸಪ್ ಸಂದೇಶಗಳ ಮೂಲಕ ಬೆಳಕಿಗೆ ಬಂದಿದೆ.
ರಷ್ಯಾದ ಮಲಯಾಳಿ ಅಸೋಸಿಯೇಷನ್ ಸದಸ್ಯರು ಆಸ್ಪತ್ರೆಯಲ್ಲಿ ದಾಖಲಾದ ಸಂದೀಪ್ ಮೃತದೇಹವನ್ನು ಗುರುತಿಸಿದ್ದಾರೆ ಮತ್ತು ನಂತರ ಅವರ ಮನೆಗೆ ಸಂದೇಶವನ್ನು ರವಾನಿಸಿದ್ದಾರೆ ಎಂದು ವರದಿಯಾಗಿದೆ. ಸೋಮವಾರ(ಇಂದು) ರಾಯಭಾರ ಕಚೇರಿಯಿಂದ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಸಂದೀಪ್ ಸೇರಿದಂತೆ 12 ಸದಸ್ಯರಿದ್ದ ರಷ್ಯಾದ ಗಸ್ತು ಘಟಕದ ಮೇಲೆ ಉಕ್ರೇನ್ ಸೇನೆಯಿಂದ ದಾಳಿ ನಡೆದಿದೆ ಎಂಬ ಮಾಹಿತಿಯನ್ನು ತಿಳಿದು ಬಂದಿದೆ.
ಶನಿವಾರ ಮತ್ತು ಭಾನುವಾರ ರಾಯಭಾರ ಕಚೇರಿ ರಜಾ ದಿನಗಳಾಗಿರುವುದರಿಂದ, ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಸಂದೀಪ್ ಅವರು ಇತರೆ ಏಳು ಜನ ಮಲಯಾಳಿಗಳೊಂದಿಗೆ ಏಪ್ರಿಲ್ 2 ರಂದು ಕೆಲಸಕ್ಕಾಗಿ ರಷ್ಯಾಕ್ಕೆ ತೆರಳಿದ್ದರು. ಅವರು ಆರಂಭದಲ್ಲಿ ಮಾಸ್ಕೋದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವುದಾಗಿ ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ನಂತರ ಅವರು ರಷ್ಯಾದ ಮಿಲಿಟರಿ ಕ್ಯಾಂಪ್‌ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುರಕ್ಷಿತವಾಗಿರುವುದಾಗಿ ತಮ್ಮ ಕುಟುಂಬಸ್ಥರಿಗೆ ತಿಳಿಸಿದ್ದರು. ಮತ್ತೊಂದೆಡೆ ಸಂದೀಪ್ ರಷ್ಯಾದ ಪೌರತ್ವ ಪಡೆಯಲು ಅಲ್ಲಿನ ಸೇನೆಗೆ ಸೇರಿದ್ದಾಗಿಯೂ ವರದಿಯಾಗಿದೆ.
Poll (Public Option)

Post a comment
Log in to write reviews