
ಕುಂದಾಪುರ: ಬೈಂದೂರು ಶನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ.
ಬೈಂದೂರು ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಶಾನು ಶಾಲಿಯಾನ್ ಅವರ ಪುತ್ರ ಮೊಹಮದ್ ಶಫಾನ್ (13) ಮೃತಪಟ್ಟ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಬೈಂದೂರು ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ನಾಗೇಂದ್ರ ಹಾಗೂ ಶಫಾನ್ ಮಧ್ಯಾಹ್ನ ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದರು. ಇಬ್ಬರಿಗೂ ಸರಿಯಾಗಿ ಈಜು ಬಾರದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಕೆರೆಯಲ್ಲಿ ಸಾರ್ವಜನಿಕರು ಪ್ರತಿನಿತ್ಯವೂ ಈಜಲು ಬರುತ್ತಿದ್ದು, ಮಂಗಳವಾರ ತಾಲೂಕಿನಾದ್ಯಂತ ವಿಪರೀತ ಮಳೆ ಇರುವ ಹಿನ್ನೆಲೆ ಕೆರೆಯ ಸಮೀಪ ಯಾರೂ ಬಾರದ ಕಾರಣ ಸಂಜೆಯವರೆಗೂ ಘಟನೆ ಬೆಳಕಿಗೆ ಬಂದಿಲ್ಲ. ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ ಕೆರೆ ಸಮೀಪ ಸೈಕಲ್ ಹಾಗೂ ಚಪ್ಪಲಿ ಇದ್ದುದರಿಂದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
Poll (Public Option)

Post a comment
Log in to write reviews