
ಹೈದರಾಬಾದ್,ತೆಲಂಗಾಣ: TSRTC ಬಸ್ ಗೆ ಆಕ್ರೋಶಗೊಂಡ ಮಹಿಳೆಯೊಬ್ಬರು ಬಿಯರ್ ಬಾಟಲಿ ಎಸೆದು ಬಸ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆಯೊಂದು ಹೈದರಾಬಾದ್‌ನ ವಿದ್ಯಾನಗರದಲ್ಲಿ ಗುರುವಾರ ನಡೆದಿದೆ. TSRTCಯ ದಿಲ್‌ಸುಖ್‌ನಗರ ಡಿಪೋಗೆ ಸೇರಿದ ಬಸ್ ಸಿಕಂದರಾಬಾದ್‌ನಿಂದ ಎಲ್‌ಬಿ ನಗರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಇಷ್ಟೆಲ್ಲ ಆಗಿದೆ.
ವಿದ್ಯಾನಗರ ಬಸ್ ನಿಲ್ದಾಣದಲ್ಲಿ ತಿರುವು ಪಡೆದುಕೊಂಡು ಮುಂದೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ಚಾಲಕನಿಗೆ ಕೈ ಸನ್ನೆ ಮೂಲಕ ಮನವಿ ಮಾಡಿದ್ದಾರೆ. ಆತ ಬಸ್ ನಿಲ್ಲಿಸದಿದ್ದಾಗ ಮಹಿಳೆ ಕೋಪಗೊಂಡು ಬಿಯರ್ ಬಾಟಲಿ ಎಸೆದು ಹಿಂಬದಿಯ ಗಾಜು ಒಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಬಸ್ನ ಗ್ಲಾಸ್ ಒಡೆದುಹೋಗಿದ್ದರಿಂದ ಚಾಲಕ ವಾಹನ ನಿಲ್ಲಿಸಿದ್ದಾರೆ. ತಕ್ಷಣ ಬಸ್ನಲ್ಲಿದ್ದ ಮಹಿಳಾ ಕಂಡಕ್ಟರ್ ಕೆಳಗಿಳಿದು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ದಾಳಿ ಮಾಡಿದ ಆಕೆಯನ್ನು ಹಿಡಿಯಲು ಮುಂದಾದಾಗ ಮಹಿಳೆ ಏಕಾಏಕಿ ತನ್ನ ಬ್ಯಾಗ್‌ನಿಂದ ಹಾವನ್ನು ಹೊರತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, TSRTC ಅಧಿಕಾರಿಗಳು ನಲ್ಲಕುಂಟಾ ಪೊಲೀಸ್ ಠಾಣೆಗೆ ಈ ಘಟನೆ ಸಂಬಂಧ ದೂರು ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಮಹಿಳೆ ಚೀಲದಲ್ಲಿ ಹಾವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
Poll (Public Option)

Post a comment
Log in to write reviews