
ಅಗರ್ತಲಾ: ತ್ರಿಪುರಾದಲ್ಲಿ ಹೆಚ್ಚಾದ ಮಳೆಯ ಪ್ರಭಾವದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ.
ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್) ಯೋಧ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾದ ಟಿಎಸ್‌ಆರ್ ಜವಾನ್ ಆಶಿಶ್ ಬೋಸ್ ಮತ್ತು ಪಶ್ಚಿಮ ತ್ರಿಪುರಾ ಜಿಲ್ಲೆಯ ಇಂದ್ರನಗರದ ಚಿರಂಜಿತ್ ಡೇ ಎಂದು ಗುರುತಿಸಲಾಗಿದೆ.
ಆ.19 ರಿಂದ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಂದ 24 ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು, ರಾಜ್ಯದಾದ್ಯಂತ 558 ಪರಿಹಾರ ಶಿಬಿರಗಳಲ್ಲಿ ಸುಮಾರು 1.28 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.
ತ್ರಿಪುರಾ ಪ್ರವಾಹಕ್ಕೆ ಸಿಲುಕಿದವರ ರಕ್ಷಿಸುವ ಸಂದರ್ಭದಲ್ಲಿ ಇಬ್ಬರು ವೀರ ಯೋಧರಾದ ಆಶಿಶ್ ಬೋಸ್ ಮತ್ತು ಚಿರಂಜಿತ್ ಡೇ ಅವರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಅಗಲಿಕೆಯಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಅವರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಮಾಣಿಕ್ ಸಹಾ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಕಡಿಮೆ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದ್ದು, ಸೆಪಹಿಜಾಲಾ ಜಿಲ್ಲೆಯ ಸೋನಮುರಾದಲ್ಲಿ ಗೋಮತಿ ನದಿಯನ್ನು ಹೊರತುಪಡಿಸಿ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಕೆಳಗಿಳಿದಿದೆ. ರಾಜ್ಯಾದ್ಯಂತ ಪ್ರವಾಹದಿಂದಾಗಿ ಸುಮಾರು 5,000 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದರು ವರದಿಯಾಗಿದೆ
Poll (Public Option)

Post a comment
Log in to write reviews