ಬೆಂಗಳೂರು:ರಾಜಧಾನಿ ಹೊರವಲಯದ ವಿಲ್ಲಾದಲ್ಲಿ ನಡೆದ ಗಾಂಜಾ, ಮದ್ಯದ ನಶೆ ಪಾರ್ಟಿಯಲ್ಲಿ ಮೂವರು ಹೆಡ್‌ಕಾನ್ಸ್‌ಟೆಬಲ್‌ಗಳು ಭಾಗಿಯಾಗಿ ಸಿಕ್ಕಿಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉದ್ಯಮಿಯೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಕಾನ್ಸ್‌ಟೆಬಲ್‌ಗಳು ಪಾಲ್ಗೊಂಡು ಸಾಥ್ ನೀಡುತ್ತಿದ್ದರು. ಚಿಕ್ಕಜಾಲ ಠಾಣೆ ಪೊಲೀಸರ ದಾಳಿ ವೇಳೆ ಕಾನ್ಸ್‌ಟೆಬಲ್‌ಗಳ ರಂಗಿನಾಟ ಬಯಲಾಗಿದೆ. ಈ ಬೆನ್ನಲ್ಲೇ ಕರ್ತವ್ಯಲೋಪ, ದುರ್ನಡತೆ ಆಧಾರದಲ್ಲಿ ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ಕಚೇರಿ ಹೆಡ್‌ಕಾನ್ಸ್‌ಟೆಬಲ್ ಆನಂದ್‌ಕುಮಾರ್, ಜೀವನ್‌ಬಿಮಾನಗರ ಠಾಣೆ ಹೆಡ್‌ಕಾನ್ಸ್‌ಟೆಬಲ್ ಮಂಜುನಾಥ್, ಉಪ್ಪಾರಪೇಟೆ ಠಾಣೆ ಕಾನ್ಸ್‌ಟೆಬಲ್ ಅನಂತರಾಜು ಸೇವೆಯಿಂದ ಅಮಾನತುಗೊಂಡಿದ್ದಾರೆ. ಮೂವರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆ ಬಾಕಿ ಉಳಿದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ತರಹುಣಸೆ ಗ್ರಾಮದ ಸುರಭಿ ವಿಲ್ಲಾ(ಹೋಮ್ ಸ್ಟೇ )ದಲ್ಲಿ ಆರ್.ಟಿ. ನಗರದ ಉದ್ಯಮಿ ಮಧುಸೂಧನ್ ಹುಟ್ಟುಹಬ್ಬದ ಪಾರ್ಟಿ ಆಯೋಜನೆಗೊಂಡಿತ್ತು. ಈ ಪಾರ್ಟಿಯಲ್ಲಿ 9 ಮಂದಿ ಯುವತಿಯರು ಸೇರಿ 19 ಮಂದಿ ಪಾಲ್ಗೊಂಡಿದ್ದರು.
ಅವಧಿ ಮೀರಿ ಪಾರ್ಟಿ ನಡೆಯುತ್ತಿದ್ದ ಮಾಹಿತಿ ಚಿಕ್ಕಜಾಲ ಠಾಣೆ ಪಿಎಸ್‌ಐ ಜಿ.ಮಹೇಶ್‌ಗೆ ಮಾಹಿತಿ ಸಿಕ್ಕಿತ್ತು. ಈ ಬೆನ್ನಲ್ಲೇ ಮಹೇಶ್ ನೇತೃತ್ವದ ತಂಡ ವಿಲ್ಲಾದ ಮೇಲೆ ದಾಳಿ ನಡೆಸಿತ್ತು. ದಾಳಿ ಕಂಡ ಕೂಡಲೇ ಪಾರ್ಟಿಯಲ್ಲಿದ್ದ ಯುವಕ/ಯುವತಿಯರು ಕಂಗಾಲಾಗಿದ್ದರು. ಪಾನಮತ್ತ ಕಾನ್ಸ್‌ಟೆಬಲ್‌ಗಳು ದಿಕ್ಕುತೋಚದೆ ಕಂಗಾಲಾಗಿದ್ದರು.
ದಾಳಿ ವೇಳೆ ಮದ್ಯ, ಸಿಗರೇಟ್, ಗಾಂಜಾ ಸೇವನೆ ಕುರುಹುಗಳು ಕಂಡುಬಂದಿದ್ದವು. ಈ ನಿಟ್ಟಿನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಧುಸೂಧನ್ ಸಹಿತ 19 ಮಂದಿಯನ್ನು ವಿಚಾರಣೆ ನಡೆಸಿದಾಗ ಹಲವರು ಸಿಗರೇಟ್ ಬಡ್ಸ್‌ನಲ್ಲಿ ಗಾಂಜಾ ಸೇದಿರುವುದನ್ನು ಬಾಯ್ಬಿಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮಧುಸೂಧನ್, ಮೂವರು ಹೆಡ್‌ಕಾನ್ಸ್‌ಟೆಬಲ್‌ಗಳು ಹಾಗೂ 9 ಯುವತಿಯರೂ ಸೇರಿದಂತೆ 19 ಮಂದಿ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. 19 ಮಂದಿಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಐವರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಅಧಿಕಾರಿ ತಿಳಿಸಿದರು.
Post a comment
Log in to write reviews