
ಬೆಳಗಾವಿ: ಕಳ್ಳತನ ಕೃತ್ಯ ನೋಡಿದ ಮಹಿಳೆಯನ್ನೇ ಬಾವಿಗೆ ತಳ್ಳಿ ಕಳ್ಳರು ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಶಿಂದೊಳಿಯಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಶಿಂದೊಳಿ ಗ್ರಾಮದ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು. ಇದನ್ನು ಮಹಿಳೆಯೊಬ್ಬಳ್ಳು ನೋಡಿದ್ದಳು, ಗ್ರಾಮಸ್ಥರಿಗೆ ತಿಳಿಸುತ್ತಾಳೆ, ನಮ್ಮ ಕೃತ್ಯ ಬೆಳಕಿಗೆ ಬರುತ್ತದೆ ಎಂದು ಮಹಿಳೆಯನ್ನೇ ಹತ್ಯೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಬಳಿಕ ದೇಗುಲದಲ್ಲಿನ ಬೆಳ್ಳಿ ಆಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಿಂದೊಳಿ ಗ್ರಾಮದ ಭಾರತಿ ಪೂಜಾರಿ (48) ಮೃತ ಮಹಿಳೆ. ಬೆಳ್ಳಂಬೆಳಗ್ಗೆ ತನ್ನ ಮನೆಯ ದನಕರುಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಇವರು ಬಂದಿದ್ದರು. ಆಗ ಮನೆ ಪಕ್ಕದಲ್ಲಿದ್ದ ಮಸಣವ್ವ ದೇಗುಲದಲ್ಲಿನ ಆಭರಣಗಳನ್ನು ಕಳ್ಳರು ಕದಿಯಲು ಮುಂದಾಗಿದ್ದರು. ಸಗಣಿ ಎಸೆದು ಮನೆಗೆ ಬರುವಾಗ ದೇಗುಲದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಭಾರತಿ ನೋಡಿದ್ದಾರೆ. ಆಗ ಭಾರತಿಯನ್ನು ಹೊತ್ತೊಯ್ದು ದೇಗಲದ ಹಿಂದಿದ್ದ ಬಾವಿಗೆ ಕಳ್ಳರು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತಿ ಮನೆಗೆ ಬಾರದೇ ಇದ್ದದುರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ದೇಗುಲದ ಎದುರು ಸಗಣಿ ಬುಟ್ಟಿ, ಬಾವಿ ಎದುರು ಮಹಿಳೆಯ ಚಪ್ಪಲಿ ನೋಡಿದ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡು, ತಕ್ಷಣವೇ ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಪಾಸಣೆ ವೇಳೆ ಬಾವಿಯಲ್ಲಿ ಭಾರತಿ ಪೂಜಾರಿ ಶವ ಪತ್ತೆಯಾಗಿದೆ. ಸ್ಥಳೀಯರೇ ಕಳ್ಳತನ ಮಾಡಿ ಗೊತ್ತಾಗಬಾರದು ಎಂದು ಈ ಕೃತ್ಯ ಎಸಗಿದ್ದಾರೆಂದು ಭಾರತಿ ಪೋಷಕರು ಆರೋಪಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Poll (Public Option)

Post a comment
Log in to write reviews