ಬೆಂಗಳೂರು: ಪಾದಯಾತ್ರೆಯಿಂದ ಏನು ಪ್ರಯೋಜನವಾಗಿಲ್ಲ. ಮೂರು ಪಾರ್ಟಿಯವರು ಒಬ್ಬರೊನ್ನಬ್ಬರು ಬೈದಾಡ್ಕೊಂಡ್ರು ಅಷ್ಟೇ. ಒಂದು ಪಕ್ಷ ಜನಾಂದೋಲನಾ, ಇನ್ನೆರೆಡು ಪಕ್ಷ ಪಾದಯಾತ್ರೆ ಮಾಡಿದ್ರು. ಅದರಿಂದ ಏನಾದರೂ ಪ್ರಯೋಜನ ಆಯ್ತಾ? ಎಂದು ಎಂಎಲ್‌ಸಿ ವಿಶ್ವನಾಥ ವಿಪಕ್ಷ ಆಡಳಿತ ಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.
ನಾವು ಮೊದಲಿನಿಂದಲೂ ನೋಡ್ತಾ ಇದ್ದೀವಿ ಇವರು ಒಬ್ಬರನ್ನೊಬ್ಬರು ಏಕವಚನದಲ್ಲಿ ಬೈದಾಡ್ಕೊಳ್ತಿದ್ದಾರೆ. ಇವರೆಲ್ಲರೂ ಮಾನ ಮರ್ಯಾದೆ ಕಳ್ಕೊಂಡಿರೋರು ಇವನ ಬಟ್ಟೆ ಅವನು ಬಿಚ್ಚಿ, ಅವನ ಬಟ್ಟೆ ಇವನು ಬಿಚ್ಚಿ ಏನಾಯ್ತು..? ಮೂರು ಪಾರ್ಟಿಯಲ್ಲಿ ಮೂರು ಬಿಟ್ಟವರೆ ಇದ್ದಾರೆ. ಇನ್ಯಾವ ರೀತಿ ಹೇಳೋಣ? ಪಾದಯಾತ್ರೆ ಉದ್ದೇಶ ಅವ್ರವ್ರದ್ದನ್ನ ಇತ್ತಿತ್ತಾಗಿ ತಿರಿಗುಸ್ಕೊಳ್ಳೋಕೆ ಅಷ್ಟೆ ಎಂದರು.
ಇನ್ನು ಮುಡಾ ಹಗರಣ, ವಾಲ್ಮೀಕಿ ಹಗರಣ ತನಿಖೆ ವಿಚಾರ ಪ್ರಸ್ತಾಪಿಸಿದ ವಿಶ್ವನಾಥ್ ಅವರು, ಜ್ಯುಡಿಷನ್ ಕಮಿಷನ್ ಕೊಡೋದ್ರಿಂದ ಏನೂ ಆಗೊಲ್ಲ. ಯಾವ ಸತ್ಯವೂ ಹೊರಗೆ ಬರೊಲ್ಲ. ರೀಡೂ, ಕೆಂಪಣ್ಣ ಕಮಿಷನ್ ಏನಾಯ್ತು? ಅದು ಏನಾಗಿದೆಂಬುದು ಇವತ್ತಿಗೂ ಗೊತ್ತಾಗ್ತಿಲ್ಲ. ಅದೇ ಆಚೆ ಬರಲಿಲ್ಲ. ಇನ್ನು ಇದು ಬರುತ್ತಾ? ಎಂದು ಪ್ರಶ್ನಿಸಿದರು.
ಬಸನಗೌಡ ಪಾಟೀಲ್ ಪಾದಯಾತ್ರೆ ಮಾಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಎಂಎಲ್‌ಸಿ ವಿಶ್ವನಾಥ್, ನಮ್ಮ ಪಾದಯಾತ್ರೆ ಯಾವಾಗಲೂ ಇರುತ್ತೆ. ಯಾರು ಕರೆಯಲಿ ಬಿಡಲಿ ನಮ್ಮ ಪಾದಯಾತ್ರೆ ಇರುತ್ತೆ ಮುಂದೆ ನೋಡೋಣ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ವಿಜಯೇಂದ್ರ ರಾಜೀನಾಮೆ ಕೊಟ್ಟು ಗೆದ್ದು ಬರಲಿ ಎಂಬ ಬಿಜೆಪಿ ಶಾಸಕ ಹರೀಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು, ಅದರಲ್ಲಿ ಏನೂ ತಪ್ಪಿಲ್ಲ. ಎಲ್ಲ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡು ಬರೋದು. ಎಲ್ಲ ಪಾರ್ಟಿಯವರು ಜನರನ್ನು ಫೂಲ್ ಮಾಡ್ತಾ ಇದ್ದಾರೆ. ಈಗಿನ ಸರ್ಕಾರ ಜನರಿಂದ ಆಯ್ಕೆಯಾಗಿ ಬಂದಿದೆ. ಸರ್ಕಾರವನ್ನ ರಾಜೀನಾಮೆ ಕೇಳೋಕೆ ಒಂದು ರೀತಿ ನೀತಿ ಇದೆ ಸುಮ್ನೆ ಯಾವುದೇ ಬೆಳವಣಿಗೆ ಇಲ್ಲದೆ ಮಾತನಾಡಬಾರದು. ಎಲ್ಲವೂ ಕಾನೂನು ಪ್ರಕಾರ ಪ್ರೂವ್ ಆಗಬೇಕು.
ಕುಮಾರಸ್ವಾಮಿ, ಯಡಿಯೂರಪ್ಪ ಇವರುಗಳು ಮುಖ್ಯಮಂತ್ರಿಯಾಗಿದ್ದವರು. ಕೋರ್ಟ್‌ನಲ್ಲಿ ಪ್ರೂವ್ ಆಗಿ ತಪ್ಪುಗಳಾಗಿದ್ದಲ್ಲಿ ರಾಜೀನಾಮೆ ಕೇಳುವುದು ಸರಿ. ಆದರೆ ಇಷ್ಟೆಲ್ಲ ಬೆಳವಣಿಗೆ ಆಗಿದೆ ಯಾವ ಪಾರ್ಟಿಯಾದ್ರೂ ಪಿಎಲ್ ಹಾಕಿದ್ದಾರಾ? ಇದೆಲ್ಲ ಏನು ಹೇಳುತ್ತೆ ಅಂದ್ರೆ ಎಲ್ಲವೂ ಅಡ್ಜಸ್ಟ್‌ಮೆಂಟ್ ಅನ್ನೋದನ್ನೇ ತೋರಿಸುತ್ತದೆ. ಸುಮ್ಮನೆ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಸರಿ ತಪ್ಪುಗಳನ್ನು ಕೋರ್ಟ್‌ಗಳು ಹೇಳಬೇಕು. ಇದೆಲ್ಲ ಸರಿಯಾಗಬೇಕು ಎಂದರೆ ಸಿಬಿಐಗೆ ಕೊಡಬೇಕು ಎಂದರು.
Post a comment
Log in to write reviews