ನವದೆಹಲಿ: ಪಂಜಾಬ್ ಹಾಗೂ ಹರಿಯಾಣದ ಗಡಿ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಕುಂದುಕೊರತೆಗಳನ್ನು "ಸಾರ್ವಕಾಲಿಕವಾಗಿ" ಸೌಹಾರ್ದಯುತವಾಗಿ ಪರಿಹರಿಸಲು ಶೀಘ್ರದಲ್ಲೇ ಬಹು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ ಎನ್ನಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಾಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ರೈತರಿಗೆ ಸಂಬಂಧಿಸಿದ ತಾತ್ಕಾಲಿಕ ಸಮಸ್ಯೆಗಳನ್ನು ಸಮಿತಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಸೂಚಿಸಿ, ಸೆ. 2ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸುಪ್ರೀಂ ಕೋರ್ಟ್‌ನ ಆಗಸ್ಟ್ 12ರ ಆದೇಶದ ಅನ್ವಯ ಪಂಜಾಬ್ ಹಾಗೂ ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಸಭೆ ನಡೆಸಲಾಗಿದ್ದು, ಈ ವೇಳೆ ನಿರ್ಬಂಧಿಸಲಾದ ಹೆದ್ದಾರಿಯನ್ನು ಭಾಗಶಃ ತೆರೆಯಲು ಅವರು ಒಪ್ಪಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಪ್ರತಿಭಟನಾನಿರತ ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ಹೆದ್ದಾರಿಯಿಂದ ಹಿಂತೆಗೆಯಲು ಮನವೊಲಿಸುವಂತೆ ಪೀಠ ಸೂಚಿಸಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್ ಹಾಗೂ ಹರಿಯಾಣದ ಅಂಬಾಲ ಬಳಿಯ ಶಂಭು ಗಡಿಯಲ್ಲಿ ಫೆಬ್ರವರಿ 13ರಿಂದ 'ಸಂಯುಕ್ತ ಕಿಸಾನ್ ಮೋರ್ಚಾ'(ರಾಜಕೀಯೇತರ) ಮತ್ತು 'ಕಿಸಾನ್ ಮಜ್ದೂರ್ ಮೋರ್ಚಾ' ರೈತರು ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾವು ದೆಹಲಿಗೆ ಮೆರವಣಿಗೆ ಮಾಡುವುದಾಗಿ ಘೋಷಿಸಿದ್ದ ಬೆನ್ನಲ್ಲೇ ಹರಿಯಾಣ ಸರ್ಕಾರ ಫೆಬ್ರವರಿಯಲ್ಲಿ ಅಂಬಾಲಾ- ನವದೆಹಲಿ ಹೆದ್ದಾರಿಯಲ್ಲಿ ಬ್ಯಾರಿಕೇಡ್ಗಳನ್ನು ಸ್ಥಾಪಿಸಿತ್ತು.
ಶಂಭು ಗಡಿಯಲ್ಲಿ ನಿರ್ಮಿಸಿರುವ ಬ್ಯಾರಿಕೇಡ್ಗಳನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಆಗಸ್ಟ್ 12ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೆದ್ದಾರಿಗಳು ಪಾರ್ಕಿಂಗ್ ಸ್ಥಳವಲ್ಲ. ಪಂಜಾಬ್ ಹಾಗೂ ಹರಿಯಾಣ ಗಡಿ ಶಂಭುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮನವೊಲಿಸಿ, ರಸ್ತೆಯಿಂದ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ತೆಗೆದುಹಾಕುವಂತೆ ಹೇಳಿತ್ತು.
Post a comment
Log in to write reviews