2024-12-24 07:13:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಾವನ್ನೇ ಗೆದ್ದ ಶತಕವೀರನ ದಂತಕಥೆ..!

ಜೀವನವೇ ಮುಗಿದು ಹೋಯಿತು’ಎನ್ನುವವರು ಈ ಹುಡುಗನ ಕಥೆಯನ್ನೊಮ್ಮೆ ಓದಲೇಬೇಕು. ಅಂದು 2022ರ ಡಿಸೆಂಬರ್ 30. ಸ್ಥಳ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ.. ಸಮಯ ಬೆಳ್ಳಂಬೆಳಗ್ಗೆ ಸರಿಸುಮಾರು 5 ಗಂಟೆ. ಅದೊಂದು ಮರ್ಸಿಡಿಸ್ ಬೆಂಜ್ ದುಬಾರಿ ಕಾರೊಂದು ಗಂಟೆಗೆ 160 ಕಿ.ಮೀ. ಮಿತಿಮೀರಿದ ವೇಗದಲ್ಲಿ ಮುನ್ನುಗ್ಗಿತ್ತು. ಮುಂಜಾನೆಯ ಗಾಢ ನಿದ್ದೆಯಲ್ಲಿದ್ದ ಕೂಗಳತೆ ದೂರದ ಗ್ರಾಮಸ್ಥರು ಒಂದ್ ಕ್ಷಣ ಬೆಚ್ಚಿ ಬೀಳುವಂತಾಗಿತ್ತು. ಯಾಕೆಂದರೆ, ಅಲ್ಲಿ ಕೇಳಿ ಬಂದ ರಭಸವಾದ ಶಬ್ಧ ನಿದ್ದೆಯಲ್ಲಿದ್ದವರಿಗೆ ಕಿವಿಯಲ್ಲಿ ಬಾಂಬಿಟ್ಟಂತೆ ಭಾಸವಾಗಿತ್ತು. ಇಷ್ಟಕ್ಕೂ ಅಪಘಾತಕ್ಕೀಡಾದ ಆ ಕಾರಿನಲ್ಲಿದ್ದದ್ದು ಬೇರೆ ಯಾರೂ ಅಲ್ಲ. ಸ್ಟಾರ್ ಕ್ರಿಕೆಟಿಗ.

ಇನ್ನೇನು ಆತ ಬದುಕುಳಿಯುತ್ತಾನಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದರೆ, ದೇವರ ದಯೆ ಅಥವಾ ಗಟ್ಟಿ ಆಯಸ್ಸು ಎಂಬಂತೆ ಆ ಸ್ಟಾರ್ ಕ್ರಿಕೆಟಿಗ ಬದುಕುಳಿದ. ಚೇತರಿಸಿಕೊಂಡು ಮತ್ತೆ ಬ್ಯಾಟ್ ಹಿಡಿದು ಫೀಲ್ಡ್ ಗಿಳಿದು ಸಿಕ್ಸರ್ ಗಳ ಸುರಿಮಳೆಗೈಯ್ಯುತ್ತಿದ್ದಾನೆ.

ಅಪಘಾತದ ದಿನ ಆ ಹುಡುಗ ಉತ್ತರಾಖಂಡ್‌ ನಲ್ಲಿದ್ದ ತನ್ನ ಗೆಳತಿಯನ್ನು ನೋಡಲು ಎಲ್ಲಿಲ್ಲದ ಕುತೂಹಲದಿಂದ ಹೊರಟಿದ್ದ. ನಿದ್ದೆಗಣ್ಣಿನಲ್ಲಿ ಡ್ರೈವಿಂಗ್ ಮಾಡುತ್ತಿದ್ದುದೇ ಆ ಅನಾಹುತಕ್ಕೆ ಕಾರಣವಾಗಿತ್ತು. ನಿದ್ದೆಯಿಂದ ಎದ್ದವನೇ, ತನ್ನ ನೆಚ್ಚಿನ ಮರ್ಸಿಡೀಸ್ ಬೆಂಜ್ ಕಾರು ಏರಿ ಸ್ಟೇರಿಂಗ್ ಹಿಡಿದಿದ್ದ.  ಆತನಿಗೆ ಮಿಂಚಿನ ವೇಗದಲ್ಲಿ ಕಾರು ಓಡಿಸುವ ಶೋಕಿ ಬೇರೆ ಇತ್ತು.. ಎದುರಾಗಿದ್ದ ಗಾಳಿಯನ್ನು ಸೀಳುತ್ತಾ ಮುನ್ನುಗ್ಗುತ್ತಿದ್ದ. ಕಾರು ನಿಯಂತ್ರಣ ತಪ್ಪಿ ರೂರ್ಕಿ ಎಂಬಲ್ಲಿ ರಸ್ತೆ ಡಿವೈಡರ್ʼಗೆ ಅಪ್ಪಳಿಸಿತು. ಅಷ್ಟಕ್ಕೆ ಕ್ಷಣ ಮಾತ್ರದಲ್ಲಿ ಕಾರಿಗೆ ಬೆಂಕಿ ಹೊತ್ತುಕೊಂಡು ಉರಿಯತೊಡಗಿತ್ತು.

ಕೂಡಲೇ ಪಕ್ಕದಲ್ಲೇ ಆಪದ್ಬಾಂಧವನ ರೀತಿಯಲ್ಲಿ ಇದ್ದ ಒಬ್ಬ ಟ್ರಕ್ ಡ್ರೈವರ್. ಸಿನಿಮೀಯ ಶೈಲಿಯಲ್ಲಿ ಓಡೋಡಿ ಬಂದವನೇ ಕಾರಿನೊಳಗೆ ಭಸ್ಮವಾಗಬೇಕಿದ್ದ ಹುಡುಗನನ್ನು ಹೊರಗೆಳೆದು ಆತನನ್ನು ರಕ್ಷಿಸಿದ್ದ.

 

ಅವತ್ತು ಆ ಕಾರು ರಸ್ತೆ ಡಿವೈಡರ್ʼಗೆ ಅಪ್ಪಳಿಸಿದ ರಭಸಕ್ಕೆ ಆತ ಸತ್ತೇ ಹೋಗಬೇಕಿತ್ತು. ಅವನದ್ದು ಅದೆಂಥಾ ಅದೃಷ್ಟವೋ ಅಥವಾ ಹುಡುಗನ ಆಯಸ್ಸು ಗಟ್ಟಿ ಇತ್ತೋ ತಿಳಿಯದು ಆತ ಬದುಕುಳಿದ. ಅವನೇ ಕ್ರಿಕೆಟರ್‌ ರಿಷಭ್ ಪಂತ್.

ಅಲ್ಲಿಂದ ಅಂದರೆ ದುರಂತ ಕಳೆದ ಭರ್ತಿ 700 ದಿನಗಳ ನಂತರ, ಅದೇ ಹುಡುಗ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾನೆ. ಕ್ರಿಕೆಟ್ ಜಗತ್ತು ಅದೆಷ್ಟೋ ಕಂಬ್ಯಾಕ್‌ ಕಥೆಗಳನ್ನು ಕಂಡಿದೆ, ಕೇಳಿದೆ. ಆದರೆ ಅಂದೆ ಇವನ ಕಥೆ ಮುಗಿದೋಯ್ತು ಅಂತ ಅಂದುಕೊಂಡವರೆಲ್ಲಾ ಇಂದಿನ ಈ ರಿಷಭ್ ಪಂತ್ ಎಂಬ ಹುಂಬ ಹುಡುಗನ ಕಂಬ್ಯಾಕ್ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಇದೊಂದು ಅದ್ಭುತವೇ ಸರಿ.

21 ತಿಂಗಳುಗಳ ಹಿಂದೆ ನಡೆದ ಅಪಘಾತದಲ್ಲಿ ರಿಷಭ್ ಪಂತ್ʼನ ಒಂದು ಮೊಣಕಾಲು ಮುರಿದಿದ್ದು, ಇನ್ನೊಂದು ಕಾಲೂ ಗಾಯವಾಗಿತ್ತು. ಇನ್ನು ಈತ ಮರಳಿ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ’ಎಂದು ಷರಾ ಬರೆದು ಬಿಟ್ಟವರು ಹತ್ತಾರು ಮಂದಿ. ಕಾರಣವೂ ಇತ್ತು. ಏಕೆಂದರೆ, ಒಬ್ಬ ವಿಕೆಟ್ ಕೀಪರ್ʼಗೆ ಮೊಣಕಾಲು ಎಷ್ಟು ಮುಖ್ಯ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆ ದುರ್ಘಟನೆಯಿಂದ ರಿಷಭ್ ಪಂತ್ ಇನ್ನೆಂದೂ ಕ್ರಿಕೆಟ್ ಆಡಲಾರ ಎಂಬ ಮಾತುಗಳೂ ಎಲ್ಲೆಡೆ ಹರಿದಾಡಿದ್ದವು.

ಆದರೆ, ಈ ಛಲವಾದಿ ಕ್ರಿಕೆಟರ್‌ ರಿಷಭ್ ಪಂತ್ ಎಲ್ಲವನ್ನೂ ಸುಳ್ಳು ಮಾಡಿದ. ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದವನೇ ಕಂಬ್ಯಾಕ್ ಕಥೆಗೆ ಮುನ್ನುಡಿ ಬರೆದು ಬಿಟ್ಟ. ಹಗಲೂ ರಾತ್ರಿ ಕಷ್ಟ ಪಟ್ಟ ರಿಷಭ್ ಪಂತ್‌ಗೆ ಇಷ್ಟೊಂದು ಆತ್ಮಸ್ಥೈರ್ಯ ಬಂದದ್ದು ಹೇಗೆ..? ಅದು ಆತನಿಗೆ ಬಾಲ್ಯ ಕಲಿಸಿದ ಪಾಠ. ಉತ್ತರಾಖಂಡ್‌ನಲ್ಲಿ ಕ್ರಿಕೆಟ್‌ಗೆ ಸ್ಕೋಪ್‌ ಇಲ್ಲದ ದಿನಗಳಲ್ಲಿ ಬಸ್‌ನಲ್ಲಿ ಆರೇಳು ಗಂಟೆ ಪ್ರಯಾಣ ಮಾಡಿ ದೆಹಲಿಗೆ ಬರುತ್ತಿದ್ದ ರಿಷಭ್ ಪಂತ್, ಮೋತಿಬಾಗ್ ನಲ್ಲಿರುವ ಗುರುದ್ವಾರದಲ್ಲಿ ಮಲಗುತ್ತಿದ್ದ.

ಚಿಕ್ಕವನಿದ್ದಾಗಲೇ ಕಡು ಕಷ್ಟಗಳನ್ನು ನೋಡಿ ಬೆಳೆದವನಲ್ಲಿ ‘ಮುಂದೆ ಏನೇ ಬಂದರೂ ಎದುರಿಸಬಲ್ಲೆ’ಎಂಬ ಆತ್ಮವಿಶ್ವಾಸ ಬೆಳೆದಿತ್ತು. “ಆತ್ಮಸ್ಥೈರ್ಯವೊಂದಿದ್ದರೆ ಸಾಕು, ಜಗತ್ತೇ ಎದುರು ನಿಂತರೂ ಜಯಿಸಬಲ್ಲೆ”ಎಂಬ ಮನಸ್ಥಿತಿಯ ಹುಡುಗ ಅವನು. ಮರಣ ಬಾವಿಯಲ್ಲಿ ಬಿದ್ದವನನ್ನು ಮತ್ತೆ ಎದ್ದು ನಿಲ್ಲಿಸಿದ್ದು ಆತನೊಳಗಿನ ಅದೇ ಆತ್ಮಸ್ಥೈರ್ಯ.

2022ರ ಡಿಸೆಂಬರ್ʼನಲ್ಲಿ ಕಾಲು ಮುರಿದುಕೊಂಡವನು. 2024ರ ಮಾರ್ಚ್‌ನಲ್ಲಿ ಐಪಿಎಲ್ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಿದ. ನಂತರ ಜೂನ್ ತಿಂಗಳಲ್ಲಿ ಟಿ-20 ವಿಶ್ವಕಪ್ ಆಡಿದ. 700 ದಿನಗಳ ನಂತರ ಈಗ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ ಕೊಡ್ತಾರೆ.

ಟೆಸ್ಟ್‌ ಪಂದ್ಯದ ಮೊದಲ ದಿನದ ಇನ್ನಿಂಗ್ಸ್‌ನಲ್ಲಿ ಉತ್ತಮ ಪದರ್ಶನ ಬಾರದ ಕಾರಣ ಮತ್ತೆ ಟೀಕೆಗೆ ಗುರಿಯಾಗುತ್ತಾರೆ. ಆದರೆ, ಇಂದಿನ ಎರಡನೇ ಇನ್ನಿಂಗ್ಸ್‌ನಲ್ಲಿ 128 ಎಸೆತಗಳನ್ನು ಎದುರಿಸಿದ ಪಂತ್‌ 109 ರನ್‌ಗಳ ಆಕರ್ಷಕ ಸೆಂಚುರಿ ಸಿಡಿಸಿ ಎಲ್ಲಾ ಟೀಕಾಕಾರರಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ್ದಾರೆ.

Post a comment

No Reviews