ಜಮ್ಮು ಕಾಶ್ಮೀರದಲ್ಲಿ ಶಿವ ಭಕ್ತರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಭಯೋತ್ಪಾದಕರ ದಾಳಿ ! 10 ಕ್ಕೂ ಹೆಚ್ಚು ಮಂದಿ ಸಾವು
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶಿವಖೋಡ ದೇವಸ್ಥಾನದಿಂದ ಕಾತ್ರಾಗೆ ಮರಳುತ್ತಿದ್ದ ಪ್ರವಾಸಿಗರಿದ್ದ ಬಸ್ ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಗಾಬರಿಗೊಂಡ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಪಕ್ಕದ ಪ್ರಪಾತಕ್ಕೆ ಉರುಳಿದೆ.
ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಬಸ್ ಚಾಲಕನಿಗೆ ಬುಲೆಟ್ ತಗುಲಿದ್ದು, ಇದರ ಪರಿಣಾಮ ಚಾಲಕ ವಾಹನದ ಮೇಲೆ ಸಮತೋಲನ ಕಳೆದುಕೊಂಡು ಬಸ್ ಆಳವಾದ ಕಂದಕಕ್ಕೆ ಬಿದ್ದಿದೆ. ಬಸ್ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಯಾತ್ರಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ನಾರಾಯಣ ಆಸ್ಪತ್ರೆ ಮತ್ತು ರಿಯಾಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಘಟನಾ ಸ್ಥಳದಲ್ಲಿ ಹಲವಾರು ಜೀವಂತ ಬುಲೆಟ್ ಗಳು ಪತ್ತೆಯಾಗಿವೆ.
ಒಂದೆಡೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನವೇ ಉಗ್ರರು ಈ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ. ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಉಗ್ರರು ಪಾಕಿಸ್ತಾನ ಮೂಲದವರಾಗಿದ್ದಾರೆ ಎಂಬುದು ತಿಳಿದುಬಂದಿದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಕೂಡ ಸ್ಥಳಕ್ಕೆ ಆಗಮಿಸಿದೆ ರಿಯಾಸಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಂಕಿತ ಉಗ್ರರು ರಜೌರಿ, ಪೂಂಛ್ ಮತ್ತು ರಿಯಾಸಿಯ ಅರಣ್ಯ ಪ್ರದೇಶಗಳಲ್ಲಿಅಡಗಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Post a comment
Log in to write reviews