ಹಾಸನ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಕಲೇಶಪುರದಲ್ಲಿ (ಜುಲೈ 30) ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಭೂ ಕುಸಿತದಲ್ಲಿ ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿರುವ ಘಟನೆ ಸಕಲೇಶಪುರ ತಾಲೂಕಿನ ಕುಂಬರಡಿ ಹಾರ್ಲೇ ಎಸ್ಟೇಟ್ ಮಧ್ಯೆ ಸಂಭವಿಸಿದೆ. ಪರಿಣಾಮವಾಗಿ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತ ಸಂಭವಿಸಿದೆ. ಪರಿಣಾಮವಾಗಿ ರಸ್ತೆ 200 ಮೀಟರ್ಗೂ ಹೆಚ್ಚು ದೂರು ಕೊಚ್ಚಿ ಹೋಗಿದೆ. ರಸ್ತೆಯೇ ಕೊಚ್ಚಿ ಹೋಗಿರುವುದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿತ್ತು.
ಹಾಸನ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆಯಿಂದಲೇ ಭಾರೀ ಮಳೆಯಾಗುತ್ತಿದೆ. ಆದರೂ ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿಲ್ಲ. ಸಕಲೇಶಪುರ ತಾಲ್ಲೂಕಿನ ಹಲವು ಕಡೆ ಸಂಪರ್ಕ ಕಡಿತಗೊಂಡಿದೆ.
ಸಕಲೇಶಪುರ ತಾಲ್ಲೂಕಿನ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿ ಅವಾಂತರವೇ ಸೃಷ್ಟಿಯಾಗಿದೆ. ದಾರಿಗಳೇ ಜಲಾವೃತವಾಗಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಜನರ ಪರದಾಟದ ನಡುವೆಯೂ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. ಭಾರೀ ಮಳೆಯ ನಡುವೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿದೆ.
ಹಾಸನ ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಬಿ ಹರಿಯುತ್ತಿರುವ ನದಿ ತೊರೆಗಳನ್ನು ಹಾದುಕೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಹೋಗಬೇಕಾದ ಪರಿಸ್ಥಿರಿ ಎದುರಾಗಿದೆ.
ಮಳೆಗೆ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮುಳುಗಡೆ ಹಿನ್ನೆಲೆ ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡುತ್ತಿದ್ದಾರೆ.
Post a comment
Log in to write reviews