ಸಕಲೇಶಪುರ: ಶಿರಾಡಿ ಘಾಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಇನ್ನೋವಾ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ತಾಯಿ – ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 4 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಂಗಳವಾರ (ಮೇ.21 ರಂದು) ನಡೆದಿದೆ. ಕಾರಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರು ಸಮೀಪದ ಬೊಂಡಲ ಗ್ರಾಮ ಮೂಲದ ಶಬೀರ್ ಅಹಮ್ಮದ್ ಎಂಬುವರ 48 ವರ್ಷದ ಪತ್ನಿ ಶಫಿಯ ಹಾಗೂ ಅವರ 21 ವರ್ಷದ ಪುತ್ರ ಶಫೀಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಮಕ್ಕಳು ಸೇರಿ 6 ಮಂದಿ ಇದ್ದರು ಎನ್ನಲಾಗಿದ್ದು, ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಾರನಹಳ್ಳಿ ಇಂದ ಸುಮಾರು ಎಂಟು ಕಿಲೋಮೀಟರ್ ದೂರದ ಶಿರಾಡಿ ಘಾಟಿನಲ್ಲಿ ಮಂಗಳವಾರ ಬೆಳಿಗ್ಗೆ 6.30ರ ಸಮಯದಲ್ಲಿ ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment
Log in to write reviews