ಬೆಂಗಳೂರು: ದಿವಂಗತ ರತನ್ ಟಾಟಾ ಅವರಿಗೆ ಕರ್ನಾಟಕದ ಬಗ್ಗೆ, ಅದರಲ್ಲೂ ಬೆಂಗಳೂರಿನ ಬಗ್ಗೆ ಅಪಾರ ಒಲವು ಹೊಂದಿದ್ದರು. ಹೂಡಿಕೆ ಮಾಡಲು ಕರ್ನಾಟಕ ಪ್ರಶಸ್ತ ಸ್ಥಳ ಎಂದಿದ್ದರು. ಟಾಟಾ ಮತ್ತು ಬೆಂಗಳೂರಿನ ಸಂಬಂದ ವ್ಯವಹಾರವೂ ಹಾಗೂ ಭಾವನಾತ್ಮಕವೂ ಆಗಿತ್ತು. ರಾಜ್ಯದಲ್ಲಿ ವಿವಿಧ ಉದ್ದಿಮೆಗಳ ಅವರ ಹೆಜ್ಜೆ ಗುರುತುಗಳಿವೆ.
ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ರತನ್ ಟಾಟಾ ಅವರಿಗೆ ಬಹಳ ಪ್ರೀತಿ. ಯಲಹಂಕದಲ್ಲಿ ನಡೆಯುವ ಏರೋ ಶೋನಲ್ಲಿ ಅವರು ಫೈಟರ್ ಜೆಟ್ಗಳನ್ನು ಏರಿ ಹೋಗುತ್ತಿದ್ದರು. ಫೈಟರ್ ಜೆಟ್ನಲ್ಲಿ ಕೂತು ಅದನ್ನು ಚಲಾಯಿಸುವುದಕ್ಕೆ ಚಾಲಾಕಿತನದ ಜೊತೆಗೆ ಗಂಡೆದೆಯೂ ಬೇಕು. ರತನ್ ಟಾಟಾ ಇಂಥ ರೈಡ್ಗಳನ್ನು ಬಹಳ ಇಷ್ಟಪಡುತ್ತಿದ್ದರು.
ಇಂಥದ್ದೇ ಒಂದು ಶೋನಲ್ಲಿ ಅವರು ಎಫ್18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. ಅದು 2011ರಲ್ಲಿ ಆದ ಘಟನೆ. 2020ರಲ್ಲಿ ಅವರು ಈ ಸಂದರ್ಭವನ್ನು ಮೆಲುಕು ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಂಬತ್ತು ವರ್ಷದ ಹಿಂದಿನ ಆ ಘಟನೆ ಈ ದಶಕದ ತನ್ನ ಅವಿಸ್ಮರಣೀಯ ಸಂದರ್ಭ ಎಂದು ಹೇಳಿದ್ದರು.
ಟಾಟಾ ಟ್ರಸ್ಟ್ಸ್ ಮೂಲಕ ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟವಾದ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.
ಬೆಂಗಳೂರಿನ ಏರ್ಪೋರ್ಟ್ನಲ್ಲಿ ಟಾಟಾ ಗ್ರೂಪ್ನಿಂದ ಹಲವು ಯೋಜನೆಗಳು ಚಾಲನೆಯಲ್ಲಿವೆ. ಏರ್ ಇಂಡಿಯಾ ಸಂಸ್ಥೆಯ ಎಂಆರ್ಒ ಘಟಕವು ಏರ್ಪೋರ್ಟ್ನಲ್ಲಿ ಸ್ಥಾಪನೆ ಆಗುತ್ತಿದೆ.
ಹೂಡಿಕೆ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಒಲವು ಇತ್ತು. ಹಿಂದೊಮ್ಮೆ ರಾಜ್ಯದಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಸಮಾವೇಶದಲ್ಲಿ ಮಾತನಾಡುತ್ತಾ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂದಿದ್ದರು. ಕರ್ನಾಟಕದಲ್ಲಿ ಉನ್ನತ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಲಭ್ಯತೆ ಇದೆ ಎಂಬುದು ಅವರು ನೀಡುತ್ತಿದ್ದ ಒಂದು ಕಾರಣ.
Post a comment
Log in to write reviews