ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆ ಅಗ್ನಿ ದುರಂತ: ಮೃತದೇಹವನ್ನು ಕೈಚೀಲದಲ್ಲಿ ಕೊಟ್ಟಿದ್ದಕ್ಕೆ ಜಿಲ್ಲಾಡಳಿತದ ವಿರುದ್ಧ ಭಾರೀ ಆಕ್ರೋಶ
ಬೆಳಗಾವಿ: ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾದ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಅವರ ಮೂಳೆಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆಗೆ ಕೊಟ್ಟಿದ್ದಾರೆ. ಸದ್ಯ ಈ ಸಂಬಂಧ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರೋ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆ ಹೊತ್ತಿ ಉರಿದು ಹೋಗಿದ್ದು, ಕೋಟ್ಯಾಂತರು ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದೇ ಮಾರ್ಕಂಡಯ ನಗರ ನಿವಾಸಿಯಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ(19) ಬೆಂಕಿಯಲ್ಲಿ ಬೆಂದು ಜೀವ ಕಳೆದುಕೊಂಡಿದ್ದಾರೆ. ಸಂಜೆ 7 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ಖಾನೆಗೆ ಬೆಂಕಿ ಹೊತ್ತಿತ್ತು. ಬೆಂಕಿ ಕೆನ್ನಾಲಿಗೆ ತೀವ್ರಗೊಂಡು ಇಡೀ ಕಾರ್ಖಾನೆಯನ್ನು ವ್ಯಾಪಿಸಿತ್ತು. ಇಡೀ ಜಿಲ್ಲಾಡಳಿತವೇ ಬೆಂಕಿ ಕೆನ್ನಾಲಿಗೆ ನಂದಿಸಲು ಶ್ರಮ ವಹಸಿತ್ತು. ಇಡೀ ರಾತ್ರಿ 8 ಅಗ್ನಿ ಶಾಮಕ ವಾಹನಗಳು, ಖಾಸಗಿ ನೀರಿನ ಟ್ಯಾಂಕರ್ ಗಳು ಶ್ರಮಿಸಿದ್ದವು.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಸತತ 16 ಗಂಟೆಯ ಕಾರ್ಯಾಚರಣೆಯ ಬಳಿಕ ಯಲ್ಲಪ್ಪ ಗುಂಡ್ಯಾಗೋಳ ಇರೋ ಸ್ಥಳವನ್ನು ಅಧಿಕಾರಿಗಳು ತಲುಪಿದ್ದರು. ಜೆಸಿಬಿ ಮೂಲಕ ಗೋಡೆ ಹೊಡೆದು ಸುಟ್ಟು ಕರಕಲಾಗಿದ್ದ ಯಲಪ್ಪನ ದೇಹದ ಮೂಳೆಗಳನ್ನು ಹೊರ ತೆಗೆದರು. ಬಳಿಕ ಕುಟುಂಬಸ್ಥರು, ತಹಶಿಲ್ದಾರ, ಡಿಎಚ್ಒ ಸ್ಥಳ ಪಂಚನಾಮೆ ಮಾಡಿ ಮೂಳೆಯೊಂದನ್ನ ಡಿಎನ್ಎ ಟೆಸ್ಟ್ ಗೆ ಎಫ್ ಎಸ್ ಎಲ್ ತಂಡ ರವಾನೆ ಮಾಡಿತು. ಅಳಿದೂಳಿದ ಮೂಳೆಗಳನ್ನ ಕುಟುಂಬಸ್ಥರಿಗೆ ಚೀಲದಲ್ಲಿ ನೀಡ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು.
Post a comment
Log in to write reviews