
ಹೈದರಾಬಾದ್: ಸ್ನಾನಗೃಹದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿಯ ಸನತ್‌ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಸೋಮವಾರ (ಜುಲೈ 22) ನಡೆದಿದೆ.
ತಂದೆ, ತಾಯಿ, ಮಗ ಮೂವರು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರ್.ವೆಂಕಟೇಶ್ (55), ಮಾಧವಿ (50) ಮತ್ತು ಹರಿ (30) ಮೃತರು.
ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಸನತ್‌ನಗರದ ಜೆಕ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಮೂವರು ವಾಸಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಕೆಲಸದಾಕೆ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಆಕೆ ವಾಪಸ್ ಮನೆಗೆ ತೆರಳಿದ್ದಳು. ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ್ತೆ ವಾಪಸ್ ಬಂದು ನೋಡಿದಾಗಲೂ ಮನೆಯಲ್ಲಿ ಯಾರೂ ಕಾಣಿಸಿರಲಿಲ್ಲ.
ಬಳಿಕ ಸ್ನಾನಗೃಹಕ್ಕೆ ಹೋಗಿರಬಹುದು ಎಂದು ಬಾವಿಸಿ ಅಲ್ಲಿಗೆ ತೆರಳಿದ್ದಾಳೆ. ಈ ವೇಳೆ ಬಾಗಿಲು ಹಾಕಿದ್ದು ಕಂಡು ಬಂದಿದ್ದು, ಬಾಗಿಲನ್ನು ತಟ್ಟಿದ್ದಾಳೆ. ಆದರೇ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಆಕೆ ಸ್ಥಳೀಯರಿಗೆ ವಿಷಯ ತಿಳಿಸಿ ಅಪಾರ್ಟ್‌ಮೆಂಟ್‌ನ ವಾಚ್ಮನ್ಗೂ ಈ ಬಗ್ಗೆ ಹೇಳಿದ್ದಾಳೆ. ಬಳಿಕ ಬಾಗಿಲು ಒಡೆದು ನೋಡಿದಾಗ ಮೂವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ.
ಪ್ರಕರಣ ದಾಖಲು: ಅಪಾರ್ಟ್‌ಮೆಂಟ್ ಮ್ಯಾನೇಜ್ಮೆಂಟ್ನವರು ಕೂಡಲೇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಪರಿಶೀಲಿಸಿರುವ ಪೊಲೀಸರು ಮೊದಲಿಗೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರಬಹುದೆಂದು ಭಾವಿಸಿದ್ದರು. ಆದರೆ ಅಂತಹ ಯಾವುದೇ ಲಕ್ಷಣಗಳು ಕಾಣದ ಕಾರಣ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಕ್ಲೂಸ್ ಟೀಮ್ ಸಹಾಯದಿಂದ ಸಾಕ್ಷ್ಯ ಸಂಗ್ರಹಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Poll (Public Option)

Post a comment
Log in to write reviews