
ಬೆಂಗಳೂರು: ಮತದಾನೋತ್ತರ ಸಮೀಕ್ಷೆಗಳು ಹೇಳಿದ ಮಾತ್ರಕ್ಕೆ ಎಲ್ಲವೂ ನಿಜವಾಗುತ್ತದೆ ಎನ್ನುವುದು ಶುದ್ಧ ಸುಳ್ಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಸಮೀಕ್ಷೆಗಳು ಬಿಜೆಪಿಯದೆ ಮೇಲುಗೈ ಎಂಬುದಾಗಿ ಬಿಂಬಿಸಿತ್ತು. ಆದರೆ ಕೊನೆಯಲ್ಲಿ ಆಗಿದ್ದೇನು. ನಾವು ಗೆದ್ದು ಅಧಿಕಾರ ವಹಿಸಿಕೊಂಡಂತೆ ಈ ಸಲ ಕೂಡಾ ಸುಳ್ಳಾಗಬಾರದು ಎಂದೇನಿಲ್ಲ. ನನ್ನ ಪ್ರಕಾರ ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ ಎಂದರು.
ರಾಜಾರೋಷವಾಗಿ ಸಮೀಕ್ಷೆ ನಡೆಸಿ ಇದು ಪಕ್ಕಾ ಎನ್ನುವ ಕೆಲ ಸಂಸ್ಥೆಗಳು ಕೇವಲ ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ರಾಜ್ಯ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನ ದಾಟಲಿದೆ. ಮತದಾರ ಪ್ರಭುಗಳು ನಮ್ಮ ಜೊತೆಯಾಗಿ ನಿಲ್ಲುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 85 ಸ್ಥಾನ ಮಾತ್ರ ಕೊಟ್ಟಿದ್ದರು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ. ಜೊತೆಗೆ ನಾನು ನಡೆಸಿದ್ದ ಖಾಸಗಿ ಸಮೀಕ್ಷೆ ಪ್ರಕಾರ ಜನ ನಮಗೆ 136 ಸ್ಥಾನ ನೀಡಿದರು. ಅಲ್ಲಿಗೆ ನನ್ನ ಅಂದಾಜು ನಿಜವಾಯಿತು. ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ನಂಬಿಕೆ ಬಂದಿದೆ. ಇವು ನಮ್ಮ ಕೈ ಹಿಡಿಯಲಿವೆ ಎಂದರು.
ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಎಐಸಿಸಿ ನೀಡಿದ ಗ್ಯಾರಂಟಿಗಳ ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿವೆ. ಗ್ಯಾರಂಟಿಗಳು ದೇಶದ ಜನರೆಲ್ಲರ ಮನಸ್ಸು ಗೆದ್ದಿವೆ. ಹಾಗಾಗಿ ನನಗೆ ನಾವು ಅತಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯುತ್ತೇವೆ ಎಂಬ ನಂಬಿಕೆ ಬಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Poll (Public Option)

Post a comment
Log in to write reviews