ಹಾಸನ: ಹಾಸನ ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಖಂಡಿಸಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಬಂಧಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಹಾಸನದ ಪಾಳೆಗಾರಿಕೆ ಪ್ರಭುತ್ವದ ಅಂತ್ಯಕ್ಕೆಂದು ನಡೆದ ಹೋರಾಟದ ನಡಿಗೆ ಹಾಸನದ ಕಡೆಗೆ ಯಶಸ್ವಿಯಾಗಿದೆ.
ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಸಾವಿರಾರು ಮಹಿಳಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾಗಿದ್ದ ಬೃಹತ್ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೆರವಣಿಗೆಯಲ್ಲಿ ಪ್ರಜ್ವಲ್ ಬಂಧನ ಹಾಗೂ ಪೆನ್ ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾನರ್ ಹಿಡಿದು ಘೋಷಣೆ ಕೂಗಿದರು. ಮೆರವಣಿಗೆ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ತಾಲ್ಲೂಕು ಕಚೇರಿ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಮಂದಿ ಮಹಿಳಾ ಕಾರ್ಯಕರ್ತೆಯರು ,ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಸುಮಾರು 143 ಸಂಘಟನೆಯ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಎಲ್ಲಾ ಸಂಘಟನೆಯ ಮುಖಂಡರು ವೇದಿಕೆಯಲ್ಲಿ ಒಟ್ಟಾಗಿ ನಿಂತು ಹೋರಾಟದ ಬ್ಯಾನರ್ ಹಿಡಿದು ಪ್ರಜ್ವಲ್ ಬಂಧನ ಹಾಗೂ ಪೆನ್ ಡ್ರೈವ್ ಹಂಚಿದವರನ್ನು ತ್ವರಿತವಾಗಿ ಬಂಧನ ಮಾಡುವಂತೆ ಘೋಷಣೆ ಕೂಗುವ ಮೂಲಕ ಸಮಾವೇಶ ಉದ್ಘಾಟನೆ ಮಾಡಿದರು.
ಸಮಾವೇಶದ ವೇದಿಕೆಯಲ್ಲಿ ಹೋರಾಟದ ಗೀತೆಯನ್ನು ಹಾಡುವ ಮೂಲಕ ನೆರದಿದ್ದವರ ಗಮನ ಸೆಳೆದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ ಜನರೇ ಪ್ರಾಯೋಜಿಸಿದ ಕಾರ್ಯ ಇದು. ಯಾವುದೇ ಆರೋಪಕ್ಕೆ ತಲೆಕೆಡಿಸಿಕೊಳ್ಳದೆ ರಾಜ್ಯದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆಯ ಮುಖ್ಯಸ್ಥರು ಮತ್ತು ಕಾರ್ಯಕರ್ತೆಯರು ಆಗಮಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಹಲವಾರು ಮಂದಿ ಲಕ್ಷಾಂತರ ರೂ ಹಣ ಸಹಾಯ ಮಾಡಿದ್ದಾರೆ ಎಂದರು. ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ದರು, ಸಿಎಂ ಸಂತ್ರಸ್ತರಿಗೆ ಸಾಂತ್ವನ ಹೇಳಲು ಆಗಮಿಸಲಿಲ್ಲ. ಯಾವುದೇ ಲಾಂಛನ ಇಲ್ಲದೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರ ಹೋರಾಟ ನಡೆಯುತ್ತಿದ್ದು, ರಾಜಕೀಯ ಪ್ರೇರಿತವಲ್ಲ ಯಾವುದೇ ಅಪವಾದಕ್ಕೆ ವಿರುದ್ಧವಾಗಿ ಪ್ರಾಮಾಣಿಕ ಹೋರಾಟ ಮಾಡಲಾಗುತ್ತಿದೆ. ಪಾಳೆಗಾರಿಕೆ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ನಾಗರೀಕ ಸಮಾಜಕ್ಕೆ ಬಲ ತುಂಬಲು ಹೋರಾಟ ಮಾಡುತ್ತಿದ್ದೇವೆ ಎಂದರು.
ಸಾಮಾಜಿಕ ಹೋರಾಟಗಾರ್ತಿ ಸುಭಾಷಿಣಿ ಆಲಿ ಮಾತನಾಡಿ ಇಂದು ಜಿಲ್ಲೆಯಲ್ಲಿ ದೌರ್ಜನ್ಯ ಕ್ಕೆ ಒಳಗಾಗಿರುವ ಮಹಿಳೆಯರ ಪರವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಮಹಿಳೆಯರಿಗೆ, ಜನರಿಗೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಮಹಾರಾಜರ ನೆನಪಿಗೆ ಮಹಾರಾಜ ಪಾರ್ಕ್ ಸ್ಥಾಪನೆ ಮಾಡಲಾಗಿದೆ. ಇಂದು ಅದೇ ಪಾರ್ಕ್ ನಿಂದ ಹೋರಾಟ ಆರಂಭಿಸಿದ್ದೇವೆ ಎಂದರು. ದೌರ್ಜನ್ಯ ನಡೆಸಿರುವ ರೇವಣ್ಣ ಅವರ ಕುಟುಂಬದ ಸದಸ್ಯರಿಗೆ ನೋ ಬೇಲ್ ಒನ್ಲಿ ಜೈಲ್ ಎಂಬ ಒತ್ತಾಯ ನಮ್ಮದು ರಾಜಕೀಯ ಬಲ ಅವರಿಗಿದೆ. ಆದ್ದರಿಂದ ಅವರಿಗೆ ಬೇಲ್ ಸಿಕ್ಕರೆ ಅಪರಾಧ ಪ್ರಕರಣದಿಂದ ಪಾರಾಗಬಹುದು ಆದ್ದರಿಂದ ಅವರನ್ನು ಬಂಧಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಎಸ್ ಆರ್ ಹಿರೇಮಠ ಮಾತನಾಡಿ, ಹಲವಾರು ದಶಕದಿಂದ ಜಿಲ್ಲೆಯಲ್ಲಿ ರೇವಣ್ಣ ಕುಟುಂಬದ ಪಾಳೆಯಗಾರಿಕೆ ಇದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಪ್ರಜ್ವಲ್ ಎಸಗಿರುವ ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಡಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರಿ ಬಂದಿದ್ದು ಅವರಿಗೆ ವೇದಿಕೆ ಕಲ್ಪಿಸಿದ್ದು, ಸಮಾನತೆಯ ಹೋರಾಟ ನಡೆಯಲಿ ಅನ್ಯಾಯ ಮಾಡಿದವರ ವಿರುದ್ಧ ಹೋರಾಟ ಮಾಡುವ ಕೆಲಸ ಮಹಿಳೆಯರು ಮಾಡಬೇಕು ಎಂದರು.
ವಕೀಲರಾದ ಎಸ್ ಬಾಲನ್, ಸಬಿಹ ಭೂಮಿ ಗೌಡ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಎಸ್ ವರಲಕ್ಷಿ, ಶೋಭಾ, ಮಾವಳ್ಳಿ ಶಂಕರ್, ರೂಪ ಹಾಸನ್ ಸೇರಿದಂತೆ ಅನೇಕರು ಮಾತನಾಡಿದರು. ಮಲ್ಲಿಗೆ ಸಿರಿಮನೆ, ಡಾ.ಸಿದ್ಧನಗೌಡ ಪಾಟೀಲ್, ಜನವಾದಿ ಮಹಿಳಾ ಸಂಘಟ ನೆಯ ಕೆ .ನೀಲಾ, ಒಡನಾಡಿ ಸಂಘಟನೆಯ ಸ್ಟ್ಯಾನ್ಲಿ, ರಾಜ್ಯ ರೈತ ಸಂಘದ ಸುನಂದ ಜಯರಾಮ್, ಲೈಂಗಿಕ ಅಲ್ಪಸಂಖ್ಯಾತ ಸಂಘಟನೆಯ ಪ್ರಕಾಶಿ, ಎಐಸಿಸಿಟಿಯು ಸಂಘಟನೆಯ ಮೈತ್ರೇಯು ಕೃಷ್ಣನ್, ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಕೆಪಿಆರ್‌ಎಸ್ ಪಕ್ಷದ ಯು ಬಸವರಾಜ್ ಇತರರು ಇದ್ದರು.
Post a comment
Log in to write reviews