ಬೆಂಗಳೂರು :ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸೋ ಕಾರ್ಯಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. ಮತ್ತಿಕೆರೆ, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಚಿಪ್ ಅಳವಡಿಕೆಗೆ ಪ್ರಾಯೋಗಿಕವಾಗಿ ಪಾಲಿಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಬಗ್ಗೆ ಆರೋಗ್ಯ, ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಮೈಕ್ರೋ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ ಸೇರಿ ಲಸಿಕೆ ನೀಡಿದ ದಿನಾಂಕ ತಿಳಿಯಬಹುದಾಗಿದೆ. ಅಲ್ಲದೆ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ ಡೇಟ್, ಇನ್ನಿತರ ಅಂಶಗಳನ್ನು ಈ ಚಿಪ್‌ನಲ್ಲಿ ಶಾಶ್ವತವಾಗಿ ಶೇಖರಿಸಬಹುದಾಗಿದೆ ಅಂತಾ ಹೇಳಿದ್ಧಾರೆ.
ಹಲವು ಸ್ಥಳೀಯ ಸಂಸ್ಥೆಗಳು ಮೈಕ್ರೋ ಚಿಪ್ ತಂತ್ರಜ್ಞಾನವನ್ನು ಈಗಾಗ್ಲೇ ಬೀದಿ ನಾಯಿಗಳಿಗೆ ಅಳವಡಿಸಿವೆ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ BIZ, ORBIT ಎಂಬ ಸಂಸ್ಥೆ ಜೊತೆ ಒಡಂಬಡಿಕೆ ಮಾಡ್ಕೊಂಡು ಪ್ರಾಯೋಗಿಕವಾಗಿ ಚಿಪ್ ಅಳವಡಿಸಲಾಗ್ತಿದೆ ಅಂತಾನೂ ಕಿಶೋರ್ ಹೇಳಿದ್ದಾರೆ.
ಅಕ್ಕಿಕಾಳು ಗಾತ್ರದ ಮೈಕ್ರೋ ಚಿಪ್ ಅಳವಡಿಕೆ..!
ಮೈಕ್ರೋಚಿಪ್ ಅಕ್ಕಿಕಾಳಿನಷ್ಟಿದ್ದು, ಶಾಶ್ವತ ಗುರುತಿನ ವಿಧಾನವಾಗಿರುತ್ತದೆ. ಪ್ರಾಣಿಗಳ ಚರ್ಮದ ಕೆಳಗೆ ಇಂಜೆಕ್ಷನ್ ಮೂಲಕ ಚಿಪ್ ಇರಿಸಲಾಗುತ್ತೆ. ಅಡ್ಡ ಪರಿಣಾಮ ಬೀರದ ಚಿಪ್, ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಾಗಿ ಬಳಸಬಹುದಾಗಿರುತ್ತದೆ. ಇದು ಪ್ರಪಂಚದಾದ್ಯಂತ ಬಳಸಲಾಗುವ ಯೂನಿಕ್ ಸಂಖ್ಯೆಯಾಗಿರುತ್ತದೆ ಎಂದು ಕಿಶೋರ್ ತಿಳಿಸಿದ್ದಾರೆ.
ʻಯಶಸ್ವಿಯಾದರೆ ಇತರೆ ವಲಯಗಳಿಗೂ ವಿಸ್ತರಣೆ..!ʼ
ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾದ್ರೆ, ಪಾಲಿಕೆಯ ಎಲ್ಲಾ ವಲಯಗಳಲ್ಲಿ ಅನುಷ್ಠಾನ ಮಾಡಲು ಪಾಲಿಕೆ ನಿರ್ಧರಿಸಿದೆ. ಶ್ವಾನಗಳಿಗೆ ಲಸಿಕೆ ಹಾಕಿರೋದನ್ನ ಸದ್ಯ ಬಣ್ಣ ಬಳಸಿ ಗುರುತಿಸಲಾಗುತ್ತಿದ್ದು, ಚಿಪ್ ಅಳವಡಿಸಿದ್ರೆ ಮತ್ತೆ-ಮತ್ತೆ ಲಿಸಿಕೆ ಹಾಕೋದನ್ನ ತಡೆಯಬಹುದಾಗಿದೆ. ಒಂದು ವೇಳೆ ಬಣ್ಣದ ಗುರುತು ವಿಧಾನವನ್ನ ಮುಂದುವರಿಸಿದ್ರೆ ಪದೇ ಪದೇ ಲಸಿಕೆ ಹಾಕುವ ಸಾಧ್ಯತೆಯಿರುತ್ತದೆ. ಚಿಪ್ ತಂತ್ರಜ್ಞಾನ ಈ ನ್ಯೂನತೆಯನ್ನ ಸರಿಪಡಿಸಬಹುದಾಗಿದೆ. ಲಸಿಕೆ ಹಾಕಿದ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದಾಗಿರುತ್ತದೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
Post a comment
Log in to write reviews