ಶ್ರೀಕೃಷ್ಣಾಷ್ಟಮಿ ಸಂಭ್ರಮ: ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ
ಮಂಗಳೂರು: ಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವನ್ನು ಇಟ್ಟು ಆರಾಧಿಸುತ್ತಾರೆ. ಇಷ್ಟು ಬಗೆಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸುವುದು ವಿರಳ. ಆದರೆ, ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆಯೊಬ್ಬರು ಈ ಬಾರಿ 116 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.
ಮಂಗಳೂರಿನ ರಥಬೀದಿಯಲ್ಲಿರುವ ಚಂದ್ರಮತಿ ಎಸ್. ರಾವ್‌ರವರೇ ಶ್ರೀಕೃಷ್ಣನಿಗೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. 66 ವರ್ಷದ ಇವರು ಪ್ರತಿವರ್ಷವೂ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಬಡಿಸುತ್ತಾರೆ. ಅದರಂತೆ ಈ ಬಾರಿ ವೈವಿದ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಚಿಪ್ಸ್ ಎಂದು 116 ಬಗೆಯ ನೈವೇದ್ಯಗಳನ್ನು ಬಡಿಸಿದ್ದಾರೆ. ವಾರಗಳಿಂದಲೇ ತಯಾರಿ ಆರಂಭಿಸುವ ಇವರು, ಮಡಿಯಲ್ಲಿದ್ದು, ಶುದ್ಧಾಚರಣೆಯಿಂದಲೇ ಈ ನೈವೇದ್ಯಗಳನ್ನು ತಯಾರಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಚಂದ್ರಮತಿ ಎಸ್ ಅವರು 'ಕೃಷ್ಣನೆಂದರೆ ನನಗೆ ಬಹಳ ಪ್ರೀತಿ. ಹಾಗಾಗಿಯೇ ಪ್ರತೀ ವರ್ಷವೂ ಅಷ್ಟಮಿಗೆ ನಾನು ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸುತ್ತೇನೆ. ಇಷ್ಟೇ ಐಟಂ ಮಾಡಬೇಕೆಂದು ನಾನು ಮಾಡುವುದಲ್ಲ. ಎಷ್ಟು ನನ್ನಲ್ಲಿ ಸಾಧ್ಯವೋ ಅಷ್ಟು ಭಕ್ಷ್ಯಗಳನ್ನು ಮಾಡುತ್ತೇನೆ. ಇದನ್ನು ನಾನು ಮಾಡುವುದಲ್ಲ. ಆ ಶ್ರೀಕೃಷ್ಣನೇ ನನ್ನಿಂದ ಮಾಡಿಸುವುದು' ಎನ್ನುತ್ತಾರೆ.
ಅಷ್ಟಮಿಯ ದಿನ ರಾತ್ರಿ ಕೃಷ್ಣನಿಗೆ ಈ ನೈವೇದ್ಯ ಬಡಿಸುತ್ತಾರೆ. ಹೆಚ್ಚಿನ ಭಕ್ಷ್ಯಗಳನ್ನು ಸ್ವಲ್ಪವೇ ಮಾಡಲಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಅವರು ಅಷ್ಟಮಿಯ ಪ್ರಸಾದ ಹಂಚುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸುಮಾರು ಏಳೆಂಟು ಬಗೆಯ ಭಕ್ಷ್ಯಗಳನ್ನು ಹೆಚ್ಚಿಗೆ ಮಾಡಿ ಅದನ್ನು ಹಂಚುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಬಡಿಸುವ ಚಂದ್ರಮತಿಯವರ ಕೃಷ್ಣಪ್ರೀತಿಗೆ ಮೆಚ್ಚಲೇ ಬೇಕಾಗಿದೆ.
Post a comment
Log in to write reviews