ಬಿತ್ತನೆ ಬೀಜದ ಬೆಲೆ ಏರಿಕೆ: ಹಿಂದಿನ ಸರ್ಕಾರ ಅನುಸರಿಸಿದ ಕ್ರಮ ಮುಂದುವರೆಸಿದ್ದೇವೆ: ಸಚಿವ ಚಲುವರಾಯ ಸ್ವಾಮಿ.

ರಾಜ್ಯದಲ್ಲಿ ಇಗಾಗಲೇ ಎಲ್ಲೆಡೆ ರೈತರು ಬಿತ್ತನೆ ಬೀಜದ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಬಿತ್ತನೆ ಬೀಜ ದರ ಹೆಚ್ಚಳಕ್ಕೆ ಕಾರಣವೇನು ಎಂಬುದರ ಬಗ್ಗೆ ಕೃಷಿ ಸಚಿವ ಚಲುವರಾಯ ಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಬಿತ್ತನೆ ಬೀಜ ದರ ಹೆಚ್ಚಳದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಬೆಲೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. 2023 -24 ನಮ್ಮ ಸರ್ಕಾರ ಅಧಿಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ ನಮ್ಮನ್ನು ಕಾಡಿದೆ. 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಮುಂಬರುವ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ಈಗಾಗಲೇ ಪೂರೈಕೆ ಮಾಡಲಾಗಿದೆ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕಳೆದ ಸಾಲಿನಲ್ಲಿ ಆಹಾರ ಧಾನ್ಯಗಳ ಮಾರಾಟ ದರ ಶೇ 40% ಏರಿಕೆಯಾಗಿದೆ. ಬಿತ್ತನೆ ಬೀಜ ಖರೀದಿ ಮೇಲೂ ಇದರ ಪರಿಣಾಮ ಬೀರಿದೆ. ಹಾಗಿದ್ದರೂ ನಾವು ಬಿತ್ತನೆ ಬೀಜಕ್ಕೆ ಶೇ 30%ರಷ್ಟು ಮಾತ್ರ ದರ ಏರಿಸಿದ್ದೇವೆ.
ಖರೀದಿ, ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಪ್ರಯೋಗಾಲಯದಲ್ಲಿ ಪರೀಕ್ಷೆ, ಗ್ರೇಡಿಂಗ್, ದಾಸ್ತಾನು ಮಾಡುವುದು, ಸಾಗಾಟ, ಬೀಜ ಪ್ರಮಾಣೀಕರಣ, ಕಾರ್ಮಿಕರ ಕೂಲಿ ಹಣ ಎಲ್ಲಾ ಸೇರಿಸಿ ಬಿತ್ತನೆ ಬೀಜದ ಮಾರಾಟ ದರ ನಿಗದಿಪಡಿಸಲಾಗುತ್ತದೆ. ಬಿತ್ತನೆ ಬೀಜವನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೇರವಾಗಿ ರೈತ ಬೀಜೋತ್ಪಾದಕರಿಂದ ಖರೀದಿಸುತ್ತೇವೆ. ಬೆಲೆ ಹೆಚ್ಚಳದ ಲಾಭವೂ ರೈತರಿಗೆ, ಬೀಜ ಉತ್ಪಾದಕರಿಗೆ ವರ್ಗಾವಣೆ ಆಗುತ್ತಿದೆ. ಇದು ನಮ್ಮ ಸರ್ಕಾರ ಬಂದ ನಂತರ ಮಾಡಿರುವ ಖರೀದಿ ಮಾರಾಟ ಪ್ರಕ್ರಿಯೆ ಅಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅನುಸರಿಸಲಾದ ಕ್ರಮ ಮುಂದುವರೆಸಿದ್ದೇವೆ. ನೆರೆಯ ಮಹಾರಾಷ್ಟ್ರದಲ್ಲಿಯೂ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರ ನಿಗಧಿ ಮಾಡಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯುವ ಶೇಂಗಾದ ಬಿತ್ತನೆ ಬೀಜದ ಬೆಲೆ ಶೇ 1% ಮಾತ್ರ ಏರಿಕೆಯಾಗಿದೆ. ಹಾಗೇ ಸೊಯಬೀನ್ ಬಿತ್ತನೆ ಬೀಜದ ಮಾರಾಟ ದರ ಶೇ 8% ಇಳಿಕೆಯಾಗಿದೆ. ರೈತರ ಹಿತ ನಮ್ಮ ಆದ್ಯತೆ ಎಂದು ಹೇಳಿದರು.
Poll (Public Option)

Post a comment
Log in to write reviews