ಲಕ್ನೋ: ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸರ್ಫರಾಝ್ ಖಾನ್ ಸ್ಪೋಟಕ ದ್ವಿಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 253 ಎಸೆತಗಳಲ್ಲಿ ಸ್ಫೋಟಕ ಡಬಲ್ ಸೆಂಚುರಿ ಪೂರೈಸಿದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಪ್ರಥಮ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಪೃಥ್ವಿ ಶಾ (4) ಹಾಗೂ ಆಯುಷ್ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ತಮೋರೆ (0) ಶೂನ್ಯಕ್ಕೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ಅಜಿಂಕ್ಯ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇದರ ನಡುವೆ 84 ಎಸೆತಗಳಲ್ಲಿ 57 ರನ್ ಬಾರಿಸಿ ಶ್ರೇಯಸ್ ಅಯ್ಯರ್ ಔಟಾದರು. ಈ ವೇಳೆ ಸ್ಥಿರ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಬ್ಯಾಟ್ ಹಿಡಿದು ಕಣಕ್ಕಿಳಿದ ಸರ್ಫರಾಝ್ ಖಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ರಹಾನೆ ಜೊತೆಗೂಡಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡ ಯುವ ದಾಂಡಿಗ ಮೈದಾನದ ಮೂಲೆ ಮೂಲೆಗೂ ಫೋರ್ಗಳನ್ನು ಬಾರಿಸಿ ಬೌಲರ್‌ಗಳ ಬೆವರಿಳಿಸಿದರು.
ಆದರೆ 2ನೇ ದಿನದಾಟದ ಆರಂಭದಲ್ಲಿ ಅಜಿಂಕ್ಯ ರಹಾನೆ (97) ವಿಕೆಟ್ ಪಡೆಯುವಲ್ಲಿ ಯಶ್ ದಯಾಳ್ ಯಶಸ್ವಿಯಾದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನೆಲೆಯೂರಿದ್ದ ಸರ್ಫರಾಝ್ ಖಾನ್ ಅತ್ಯುತ್ತಮ ಬ್ಯಾಟಿಂಗ್ನೊಂದಿಗೆ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.
ಆಕರ್ಷಕ ಸ್ವೀಪ್ ಶಾಟ್ಗಳೊಂದಿಗೆ ಶೇಷ ಭಾರತ ತಂಡದ ಬೌಲರ್‌ಗಳ ಬೆಂಡೆತ್ತಿದ ಸರ್ಫರಾಝ್ ಖಾನ್ 253 ಎಸೆತಗಳಲ್ಲಿ 23 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ದ್ವಿಶತಕ ಪೂರೈಸಿದರು. ಈ ಮೂಲಕ ಇರಾನಿ ಕಪ್ನಲ್ಲಿ ಮುಂಬೈ ಪರ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
1972 ರ ಇರಾನಿ ಕಪ್ನಲ್ಲಿ ಆರ್ಡಿ ಪಾರ್ಕರ್ 195 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಸರ್ಫರಾಝ್ ಖಾನ್ ಡಬಲ್ ಸೆಂಚುರಿ ಸಿಡಿಸುವ ಮೂಲಕ ಮುಂಬೈ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಈ ದ್ವಿಶತಕದ ನೆರವಿನಿಂದ ಮುಂಬೈ ತಂಡವು 127 ಓವರ್ಗಳ ಮುಕ್ತಾಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 484 ರನ್ ಕಲೆಹಾಕಿದೆ.
Post a comment
Log in to write reviews