
ಆಂಧ್ರ ಪ್ರದೇಶ: ಎಸ್ಸೆಂಟಿಯಾ ಫಾರ್ಮಾ ಕಂಪನಿಯಲ್ಲಿ ಬುಧವಾರ (ಆಗಸ್ಟ್ 21) ರಿಯಾಕ್ಟರ್ ಸ್ಫೋಟಗೊಂಡು 17 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂನಲ್ಲಿ ನಡೆದಿದೆ. ಭಾರೀ ಪ್ರಮಾಣದಲ್ಲಿ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಧ್ಯಾಹ್ನದ ಊಟದ ವಿರಾಮದ ವೇಳೆ ರಿಯಾಕ್ಟರ್ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿತ್ತು. ಕಂಪನಿಯ ಆವರಣದಲ್ಲಿ ದಟ್ಟ ಹೊಗೆ ಆವರಿಸಿತ್ತು. ದೊಡ್ಡ ಸದ್ದು ಕೇಳಿ ವಿರಾಮದಲ್ಲಿದ್ದ ಕಾರ್ಮಿಕರು ಬೆಚ್ಚಿಬಿದ್ದರು. ಕೆಲವರು ಕಂಪನಿಯ ಒಳಗಿನಿಂದ ಕಿರುಚುತ್ತ ಓಡಿ ಬಂದರು. ರಿಯಾಕ್ಟರ್ ಸ್ಫೋಟದ ಸಮಯದಲ್ಲಿ 300 ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದೇಹಗಳು ಛಿದ್ರ ಛಿದ್ರ: ರಿಯಾಕ್ಟರ್ ಸ್ಫೋಟದಿಂದಾಗಿ ಕಂಪನಿಯ ಮೊದಲ ಮಹಡಿಯ ಸ್ಲ್ಯಾಬ್ ಕುಸಿದಿದೆ. ಸ್ಫೋಟದ ತೀವ್ರತೆಗೆ ಕಾರ್ಮಿಕರು ದೇಹಗಳು ಛಿದ್ರವಾಗಿವೆ. ಐವರ ಮೃತದೇಹಗಳನ್ನು ಅನಕಾಪಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಗೆ ಮತ್ತು ಬೆಂಕಿ ಆವರಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡವರ ಪೈಕಿ ಐವರಿಗೆ ಶೇ.60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿದ ಅಧಿಕಾರಿಗಳು ದುರಂತ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಿಯಾಕ್ಟರ್ ಸ್ಫೋಟಗೊಳ್ಳಲು ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಿಎಂ ಚಂದ್ರಬಾಬು ನಾಯ್ಡು ದಿಗ್ಭ್ರಮೆ: ಫಾರ್ಮಾ ಕಂಪನಿಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಸ್ಫೋಟ ಘಟನೆ ಕುರಿತು ಜಿಲ್ಲಾಧಿಕಾರಿ ಜತೆ ಮಾತನಾಡಿದ್ದು, ತಕ್ಷಣದ ಪರಿಹಾರ ಕ್ರಮಗಳಿಗೆ ಆದೇಶಿಸಿದ್ದಾರೆ.
Poll (Public Option)

Post a comment
Log in to write reviews