
ಕನ್ನಡದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ರಾಜ್ ಬಿ ಶೆಟ್ಟಿ ಈಗಾಗಲೇ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸಿ ಅದು ಬಿಡುಗಡೆ ಆಗಿದೆ. ಇದೀಗ ರಾಜ್ ಬಿ ಶೆಟ್ಟಿ ನಟಿಸಿರುವ ಎರಡನೇ ಮಲಯಾಳಂ ಸಿನಿಮಾ ಸದ್ದಿಲ್ಲದೆ ಇಂದು ತೆರೆಗೆ ಬಂದಿದೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ನಟಿಸಿದ್ದ ‘ಟರ್ಬೊ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಇದು ರಾಜ್ ಬಿ ಶೆಟ್ಟಿಯ ಮೊದಲ ಮಲಯಾಳಂ ಸಿನಿಮಾ ಆಗಿತ್ತು. ಈ ಸಿನಿಮಾದ ಬಳಿಕ ಇದೀಗ ರಾಜ್ ಬಿ ಶೆಟ್ಟಿ ನಟಿಸಿರುವ ಮತ್ತೊಂದು ಮಲಯಾಳಂ ‘ಕೊಂಡಲ್’ ಹೆಸರಿನ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾ ಮೀನುಗಾರರ ಕತೆಯೊಂದನ್ನು ಹೊಂದಿದ್ದು, ಸಿನಿಮಾದ ಬಹುತೇಕ ಕತೆ ಒಂದು ಮೀನು ಹಿಡಿಯುವ ಬೋಟ್ನಲ್ಲಿ ನಡೆಯುತ್ತಿರುವಂತೆ ಟ್ರೈಲರ್ನಿಂದ ತೋರಿ ಬರುತ್ತಿದೆ. ಮೀನು ಹಿಡಿಯಲು ಹೋಗುವವರ ನಡುವಿನ ಸಂಘರ್ಷ, ಹೊಡೆದಾಟ, ತಂತ್ರ-ಕುತಂತ್ರ, ಅವರು ಎದುರಿಸುವ ಸವಾಲುಗಳು ಸಿನಿಮಾದ ಕತೆಯಲ್ಲಿರುವಂತಿದೆ.
ರಾಜ್ ಬಿ ಶೆಟ್ಟಿ ಟ್ರೈಲರ್ನ ಕೊನೆಯಲ್ಲಿ ಕಾಣಿಸಿಕೊಂಡರೂ ಸಹ ಅವರದ್ದು ಬಹಳ ಪ್ರಮುಖವಾದ ಪಾತ್ರ ಎಂಬುದು ಅವರ ಎಂಟ್ರಿಯಿಂದಲೇ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ಆಂಟೊನಿ ವರ್ಗೀಸ್ ಪೆಪೆ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಅಜಿತ್ ಮಾಂಪಲ್ಲಿ, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಈ ಹಿಂದೆ, ‘ಬ್ಯಾಂಗಳೂರ್ ಡೇಸ್’, ‘ಮಿನ್ನಲ್ ಮುರಲಿ’, ‘ತಲ್ಲುಮಾಲ’, ‘ಆರ್ಡಿಎಕ್ಸ್’ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಣ ಸಂಸ್ಥೆಯಾಗಿದೆ.
Poll (Public Option)

Post a comment
Log in to write reviews