ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಸಾಲಿನ ಟಿ 20 ಕ್ರಿಕೇಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬಹು ನಿರೀಕ್ಷಿತ ಐಪಿಎಲ್-2024 (IPL 2024) ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (CSK vs RCB) ಸಜ್ಜಾಗಿವೆ. ಪ್ರಸಕ್ತ ಆವೃತ್ತಿಯಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ಕದನಕ್ಕೆ ಇಡೀ ವಿಶ್ವವೇ ಕಾಯುತ್ತಿದೆ. ಇದು ಕೇವಲ ಲೀಗ್ ಪಂದ್ಯವಾದರೂ ಫೈನಲ್ ನಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣ, ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದ ತಂಡವು ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಳ್ಳುವ ಕಾರಣ ಅತಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಚಿನ್ನಸ್ವಾಮಿ ಮೈದಾನ ಸಿದ್ಧಗೊಂಡಿದೆ.
ನಿರ್ಣಾಯಕ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವ ನಿರೀಕ್ಷೆ ಮಾಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ ಶೇ 80 ರಿಂದ 90ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಪಂದ್ಯಕ್ಕೂ ಮುನ್ನ ಕಾಕತಾಳೀಯ ಘಟನೆಯೊಂದು ನಡೆಯುತ್ತಿದೆ. ಹೌದು. ಅದೇ ದಿನ, ಅದೇ ದಿನಾಂಕ, ಅದೇ ವಾರ, ಅದೇ ಮೈದಾನ, ಅದೇ ಸಂದರ್ಭ, ಅದೇ ಪಂದ್ಯ.. ಹೀಗೆ ಎಲ್ಲವೂ ಕಾಕತಾಳೀಯ ಎನ್ನುವಂತಿದೆ. ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯ. ಈ ಕಾಕತಾಳೀಯ ಲೆಕ್ಕಾಚಾರದಂತೆ ಆರ್ಸಿಬಿ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಅಭಿಮಾನಿಗಳು.
ನಿಜ, 2013ರಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳು ಇಂತಹದ್ದೇ ಸಂದರ್ಭವನ್ನು ಎದುರಿಸಿದ್ದವು. ಅವತ್ತು, ಇವತ್ತು ಸಹ ಉಭಯ ತಂಡಗಳಿಗೂ ಇದು ಕೊನೆಯ ಲೀಗ್ ಪಂದ್ಯ. ಆ ಪಂದ್ಯವು ಮೇ 18 ರಂದೇ ನಡೆದಿತ್ತು. ಅವತ್ತು ಸಹ ಶನಿವಾರವೇ ಆಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ಪಂದ್ಯ ಜರುಗಿತ್ತು. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಅಂದಿನ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತ್ತು. ಕೊನೆಗೆ ಡಿಎಲ್ಎಸ್ ನಿಯಮದಡಿ ಎಂಟು ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. ಆರ್ಸಿಬಿ 24 ರನ್ ಗಳಿಂದ ಗೆದ್ದು ಬೀಗಿತ್ತು.
ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ....
ಆರ್‌ಸಿಬಿ 13 ಪಂದ್ಯಗಳಲ್ಲಿ (6 ಗೆಲುವು, 7 ಸೋಲು) ಒಟ್ಟು 12 ಅಂಕಗಳನ್ನು ಹೊಂದಿದೆ. ಅಲ್ಲದೆ +0.387 ನೇಟ್ ರನ್‌ರೇಟ್ ಕಾಯ್ದುಕೊಂಡಿದೆ. ಮತ್ತೊಂದೆಡೆ ಸಿಎಸ್‌ಕೆ 13 ಪಂದ್ಯಗಳಲ್ಲಿ (7 ಗೆಲುವು, 6 ಸೋಲು) 14 ಅಂಕಗಳನ್ನು ಗಳಿಸಿದ್ದು, +0.528ರ ನೆಟ್ ರನ್‌ರೇಟ್ ಹೊಂದಿದೆ.
ಕೋಲತ್ತ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ-ಆಫ್‌ಗೆ ಪ್ರವೇಶಿಸಿವೆ. ಅಲ್ಲದೆ ನಾಲ್ಕನೇ ಸ್ಥಾನಕ್ಕಾಗಿ ಆರ್‌ಸಿಬಿ ಹಾಗೂ ಸಿಎಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಹಾಗಾಗಿ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆಯನ್ನು ಮಣಿಸುವುದಷ್ಟೇ ಅಲ್ಲದೆ ಅದಕ್ಕಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವುದು ಆರ್‌ಸಿಬಿ ಪಾಲಿಗೆ ಅತ್ಯಂತ ಮುಖ್ಯವೆನಿಸಿದೆ. ಇದಕ್ಕೆ ವರುಣನ ಕೃಪೆಯೂ ಬೇಕಿದೆ.
ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದಲ್ಲಿ ಆರ್‌ಸಿಬಿ ಕನಿಷ್ಠ 18 ರನ್ ಅಂತರದ ಅಥವಾ ಚೇಸಿಂಗ್ ಮಾಡಿದ್ದಲ್ಲಿ 18.1 ಓವರ್‌ನಲ್ಲಿ ಗೆಲುವು ದಾಖಲಿಸಬೇಕಿದೆ. ಒಂದು ವೇಳೆ ಆರ್‌ಸಿಬಿ 200 ರನ್ ಗಳಿಸಿದ್ದಲ್ಲಿ ಎದುರಾಳಿ ತಂಡವನ್ನು 182ಕ್ಕೆ ನಿಯಂತ್ರಿಸಬೇಕಿದೆ. ಆ ಮೂಲಕ ಸಿಎಸ್‌ಕೆಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ ನಾಲ್ಕನೇ ತಂಡವಾಗಿ ಪ್ಲೇ-ಆಫ್‌ಗೆ ಲಗ್ಗೆ ಇಡಲಿದೆ.
Post a comment
Log in to write reviews