ಶ್ರೀನಗರ : ಇಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ ತೀರದಲ್ಲಿ ಸಾವಿರಾರು ಯೋಗಪಟುಗಳೊಂದಿಗೆ ಯೋಗ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಸ್ವಯಂ ಮತ್ತು ಉತ್ತಮ ಸಮಾಜಕ್ಕೆ ಯೋಗ ಬಹುಮುಖ್ಯ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಸುಮಾರು 7 ಸಾವಿರ ಯೋಗ ಪಟುಗಳು ದಾಲ್ ಸರೋವರ ಮೈದಾನದಲ್ಲಿ ಯೋಗ ಮಾಡುವ ಮೂಲಕ ಅತ್ಯಂತ ಆಕರ್ಷಣೀಯವಾಗಿ ಯೋಗದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗದ ಮಹತ್ವ ಕುರಿತು ಮಾತನಾಡಿದ ಮೋದಿ, ಯೋಗವು ಸ್ವಯಂ ಮತ್ತು ಸಮಾಜಕ್ಕಾಗಿ ಬೇಕು ಎಂಬ ಸಂದೇಶವನ್ನು ಸಾರಿದರು. ಯೋಗದ ಮೂಲಕ ನಾವು ಪಡೆಯುವ ಶಕ್ತಿಯನ್ನು ಶ್ರೀನಗರದಲ್ಲಿ ನಾವಿಂದು ಅನುಭವಿಸಬಹುದು. ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ಮೋದಿ ಶುಭಾಶಯ ತಿಳಿಸಿದರು.
ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014ರಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದೆ. ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು ಮತ್ತು ಇದು ಸ್ವತಃ ಒಂದು ದಾಖಲೆಯಾಗಿದೆ. ಅಂದಿನಿಂದ ಯೋಗ ದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Post a comment
Log in to write reviews