ಬೆಂಗಳೂರು: ಚುನಾವಣೆಯ ಸಮೀಕ್ಷೆ ಫಲಿತಾಂಶ ಬಂದ ಬಳಿಕ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಎದೆ ಬಡಿತ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಣ್ಣದಲ್ಲ. ಇದರ ಆಳ ಮತ್ತು ಅಗಲ ಹೆಚ್ಚಿದೆ. ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಲು ನಾವು ಆಗ್ರಹಿಸಿದ್ದರೂ ಮುಖ್ಯಮಂತ್ರಿಗಳು ಇನ್ನೂ ಮನಸ್ಸು ಮಾಡಿಲ್ಲ ಎಂದು ಆಕ್ಷೇಪಿಸಿದರು.
ನಕಲಿ ಕಂಪನಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ವರ್ಗಾಯಿಸಿದ್ದಲ್ಲದೆ ತೆಲಂಗಾಣಕ್ಕೆ ಹಣ ಕೊಂಡೊಯ್ಯಲಾಗಿದೆ. ಚುನಾವಣೆ ಸಂದರ್ಭದಲ್ಲಿ ಎಸ್‍ಟಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ತೆಲಂಗಾಣಕ್ಕೆ ವರ್ಗಾಯಿಸಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೋಸ್ಕರ. ಬೇರೆ ಬೇರೆ ಖಾತೆಗಳಿಂದ ಈ ಹಣ ಚುನಾವಣೆಗೆ ದುರುಪಯೋಗ ಆಗಿದೆ ಎಂದು ಆರೋಪಿಸಿದರು.
ಸಿಬಿಐ ತನಿಖೆಗೆ ಕೋರಿ ಯೂನಿಯನ್ ಬ್ಯಾಂಕ್ ಕೂಡ ಪತ್ರ ಬರೆದಿದೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಮ್ಮ ಕೊಳಕನ್ನು ಮುಚ್ಚಿ ಹಾಕಲು ಆತುರಾತುರವಾಗಿ ಎಸ್‍ಐಟಿ ರಚಿಸಿದ್ದಾರೆ. ಈ ವಿಚಾರದಲ್ಲಿ ಪಕ್ಷ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ. ವಾಲ್ಮೀಕಿ ನಿಗಮದ ಹಗರಣವು ಕೇವಲ ಸಚಿವರಿಗೆ ಸೀಮಿತವಾಗಿಲ್ಲ. ಬಹಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ. ಎಸ್‍ಐಟಿಯಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಶೀಘ್ರವೇ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯ ಮಾಡಲಿದ್ದೇವೆ ಎಂದರು.
Post a comment
Log in to write reviews