ಇಸ್ಪೀಟ್ ಅಡುತ್ತಿದ್ದವರ ಮೇಲೆ ಪೊಲೀಸ್ ದಾಳಿ, ನದಿಗೆ ಹಾರಿ 6 ಆರೋಪಿಗಳು ಸಾವು !
ವಿಜಯಪುರ: ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪ ಏರಿ ಹೊರಟ ಆರು ಜನ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಕೋಲಾರ ತಾಲೂಕಿನ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ.
ಆರು ಜನರ ಗುಂಪು ನದಿ ತೀರದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಲಾರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಇಸ್ಪೀಟ್ ಆಟಗಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಅಲ್ಲಿಯೇ ಇದ್ದ ತೆಪ್ಪ ಏರಿದ್ದಾರೆ. ನದಿಯಲ್ಲಿ ಸ್ಪಲ್ಪ ದೂರ ಹೋಗುತ್ತಿರುವಂತೆ ಸುಳಿಗೆ ಸಿಲುಕಿ ತೆಪ್ಪ ನೀರಿನಲ್ಲಿ ಮಗುಚಿದೆ. ಈಜು ಬಾರದೇ ಎಲ್ಲರೂ ನದಿಯಲ್ಲಿ ಮುಳುಗಿದ್ದಾರೆ.
ಕುಟುಂಬದವರ ಆಕ್ರಂದನ ಕೋಲಾರ ಪಟ್ಟಣದ ನಿವಾಸಿಗಳಾದ ಮಹಿಬೂಬ್ ವಾಲಿಕಾರ(30), ತಯ್ಯಬ್ ಚೌಧರಿ(42), ರಫೀಕ್ ಜಾಲಗಾರ ಅಲಿಯಾಸ್ ಬಾಂದೆ(55), ಪುಂಡಲೀಕ ಮಲ್ಲಪ್ಪ ಯಂಕಂಚಿ(36), ದಶರಥ ಗೌಡರ ಸೂಳಿಬಾವಿ(66) ಸಾವಿಗೀಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾವಿಗೀಡಾಗಿರುವ ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಶವಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ ಆಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೋಲಾರ ಪೊಲೀಸ್ ಠಾಣೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
Post a comment
Log in to write reviews