ಪೋಕ್ಸೋ ಪ್ರಕರಣ: ಬಿಎಸ್‌ವೈ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬಿಎಸ್.ವೈ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಇದೀಗ ಈ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿದೆ. ನಿನ್ನೆ(ಜೂನ್ 27) ಪೊಲೀಸರು, ಬೆಂಗಳೂರಿನ ಪೋಕ್ಸೋ ವಿಶೇಷ ಕೋರ್ಟ್‌ಗೆ 75 ಸಾಕ್ಷಿಗಳ ಹೇಳಿಕೆ ಸೇರಿದಂತೆ 750 ಪುಟಗಳ ಚಾರ್ಜ್‌ಶೀಟ್ ಅನ್ನು ಸಿಐಡಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ : ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಮಾರ್ಚ್ 14ರ ರಾತ್ರಿ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ಆಗಮಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿಂದೆ, ತಮ್ಮ 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ. ಫೆ. 2ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜೊತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರವಾಗಿ ವಕಾಲತ್ತು ವಹಿಸಲು ಎಸ್‌ಪಿಪಿ ಅಶೋಕ್ ಎನ್.ನಾಯಕ್ ಅವರನ್ನು ನೇಮಿಸಿದೆ.
Poll (Public Option)

Post a comment
Log in to write reviews