
ನವದೆಹಲಿ: ಜುಲೈ 23ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್ ದಿಕ್ಕು ದೆಸೆ ಹೇಗಿರಬೇಕು ಎಂದು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಜ್ಞರ ಸಭೆ ನಡೆಸಿದರು.
ಮಧ್ಯಾಹ್ನ 12 ಗಂಟೆಗೆ ಶುರುವಾದ ಸಭೆಯಲ್ಲಿ ಉದ್ಯೋಗ ಸೃಷ್ಟಿಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು, ಯಾವೆಲ್ಲಾ ವಲಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುರ್ಜಿತ್ ಭಲ್ಲ, ಎ.ಕೆ.ಭಟ್ಟಾಚಾರ್ಯ, ಪ್ರೊ|ಅಶೋಕ್ ಗುಲಾಟಿ, ಕೆ.ವಿ.ಕಾಮತ್ ಹಾಗು ನೀತಿ ಆಯೋಗ್ನ ಉಪಾಧ್ಯಕ್ಷ ಸುಮನ್ ಬೇರಿ ಮತ್ತಿತರ ಸದಸ್ಯರೂ ಸಭೆಗೆ ಪಾಲ್ಗೊಂಡಿದ್ದರು.
ಈ ಬಾರಿಯ ಮುಂಗಡ ಪತ್ರವು ಹಲವು ಐತಿಹಾಸಿಕ ಹೆಜ್ಜೆಗಳನ್ನು ಒಳಗೊಂಡಿರುತ್ತದೆ. ಸುಧಾರಣೆ ಕ್ರಮಗಳಿಗೆ ಇನ್ನಷ್ಟು ಪುಷ್ಟಿ ಕೊಡಲಾಗುತ್ತದೆ ಎಂದು ಕಳೆದ ತಿಂಗಳು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಜೆಟ್ ಸಂಬಂಧ ವಿವಿಧ ಉದ್ಯಮ ವಲಯಗಳ ನೇತಾರರು, ಪ್ರಮುಖ ಆರ್ಥಿಕ ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಚಿವರು ಸೇರಿದಂತೆ ಎಲ್ಲಾ ಭಾಗಿದಾರರೊಂದಿಗೆ ಬಜೆಟ್ ಸಂಬಂಧ ಸಮಾಲೋಚನೆ ನಡೆಸಿ ಸಲಹೆಗಳನ್ನು ಸಂಗ್ರಹಿಸಿದ್ದಾರೆ. ಒಟ್ಟಾರೆ ಈ ಬಜೆಟ್‌ನಲ್ಲಿ ಉದ್ಯೋಗಸೃಷ್ಟಿಗೆ ಪೂರಕವಾಗಿರುವ ಕ್ರಮಗಳನ್ನು ಜಾರಿಗೊಳಿಸುವತ್ತ ಗಮನ ಹರಿಸಬಹುದು ಎನ್ನಲಾಗುತ್ತಿದೆ ಎಂದು ಕೇಳಿ ಬರುತ್ತಿದೆ.
ಸಾಮಾನ್ಯ ವ್ಯಕ್ತಿಗೆ, ಅದರಲ್ಲೂ ಕಡಿಮೆ ಸಂಬಳದ ವರಮಾನ ಇರುವ ಜನರಿಗೆ ತೆರಿಗೆ ಹೊರೆ ಬೀಳಬಾರದು. ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ಬದಲಾವಣೆ ಮಾಡಬೇಕು. ತೆರಿಗೆ ವಿನಾಯಿತಿ, ರಿಯಾಯಿತಿಗಳನ್ನು ಹೆಚ್ಚಿಸಬೇಕು. ಮಹಿಳೆಯರಿಗೆ ಹೆಚ್ಚು ತೆರಿಗೆ ಲಾಭ ಕೊಡಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ.
Poll (Public Option)

Post a comment
Log in to write reviews