ಸಿಎಂ ವಿರುದ್ಧ ಪ್ರಾಸಿಕ್ಯೂಷನ್’ಗೆ ಅನುಮತಿ: ಮೈತ್ರಿಪಕ್ಷಗಳ ಹೋರಾಟಕ್ಕೆ ಜಯ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಗೌರವಾನ್ವಿತ ರಾಜ್ಯಪಾಲರು ಅನುಮತಿ ನೀಡಿರುವುದು ಮೈತ್ರಿಪಕ್ಷಗಳ ಹೋರಾಟಕ್ಕೆ ಸಂದ ಜಯ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ನಿಖಿಲ್, ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕೆಂದು ಒತ್ತಾಯಿಸಿ ಜೆಡಿಎಸ್, ಬಿಜೆಪಿ ಪಕ್ಷಗಳು ಬೆಂಗಳೂರಿನಿಂದ ಮೈಸೂರು ನಗರಕ್ಕೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಬಹುದು’ ಎಂದು ಹೇಳಿದ್ದಾರೆ.
ನಮ್ಮ ಹೋರಾಟ ಸತ್ಯದ ಪರ ಎಂಬುದನ್ನು ರಾಜ್ಯಪಾಲರು ಕೈಗೊಂಡಿರುವ ಕ್ರಮ ಸಾಬೀತುಪಡಿಸಿದೆ. ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ಅಕ್ರಮ ಎಸಗಿದೆ ಎಂಬುದು ಅಷ್ಟೇ ಸತ್ಯ’ ಎಂದು ನುಡಿದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಿಗೆ ಅನ್ಯ ಆಯ್ಕೆಯೇ ಇಲ್ಲ. ಅವರು ಸತ್ಯ ಒಪ್ಪಬೇಕು, ಅಕ್ರಮ ಅಂಗೀಕರಿಸಬೇಕು. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಾನು ಶುದ್ಧ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯನವರು ಗೌರವಯುತವಾಗಿ ನಿರ್ಗಮಿಸಬೇಕು. ಇಲ್ಲವಾದರೆ, ನಮ್ಮ ಹೋರಾಟ ನಿರಂತರ’ ಎಂದು ಎಚ್ಚರಿಸಿದ್ದಾರೆ.
Poll (Public Option)

Post a comment
Log in to write reviews