ಪಂಚಮಸಾಲಿ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಭೆ ನಡೆಯಿತು. ಸಭೆಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಶ್ರೀ ಸೇರಿದಂತೆ ಸಮುದಾಯದ ಘಟನಾನುಘಟಿ ನಾಯಕರೇ ಭಾಗಿಯಾದರು. ಸಚಿವರಾದ ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಜಯಾನಂದ್ ಕಾಶಪ್ಪನವರ್, ವಿನಯ್ ಕುಲಕರ್ಣಿ, ಶಾಸಕ ಯತ್ನಾಳ್ ಸೇರಿದಂತೆ ಹಲವರು ಭಾಗಿಯಾದರು. ಹೋರಾಟಕ್ಕೆ ನ್ಯಾಯ ಒದಗಿಸಿಕೊಡುವಂತೆ ಎಲ್ಲರೂ ಸಿಎಂಗೆ ಒತ್ತಾಯ ಮಾಡಿದರು.
ಪಂಚಮಸಾಲಿ 2ಎ ಮೀಸಲಾತಿಗೆ ಈ ಹಿಂದೆ ದೊಡ್ಡ ಹೋರಾಟವೇ ನಡೆದಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿವೆ. ಅದೆಷ್ಟೋ ಗಡುವುಗಳು ಅಂತ್ಯವಾಗಿದೆ. ಇದೀಗ ಸರ್ಕಾರದ ಮೂಲಕ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಅರಿತ ಸ್ವಾಮೀಜಿ ಹೊಸ ಹಾದಿಯನ್ನೇ ಹಿಡಿದಿದ್ದಾರೆ. ನ್ಯಾಯಾಲಯದಲ್ಲಿ ವಕೀಲರ ಮೂಲಕ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇನ್ನೂ ಇದೇ ವೇಳೆ ಸಭೆಗೂ ಮುನ್ನ ಕೂಡಲ ಸಂಗಮ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿತ್ತು. ಕಾಲ್ನಡಿಗೆಯಲ್ಲಿ ಪಂಚಮಸಾಲಿ ಸಮುದಾಯದ ನಾಯಕರೇ ಸೇರಿದ್ದರು. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಿಂದ ಸಿಎಂ ಗೃಹ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಲಾಯಿತು. ಕಾಲ್ನಡಿಗೆಯಲ್ಲಿ ಸ್ವಾಮೀಜಿಗೆ ಬಿಜೆಪಿ ಶಾಸಕ ಯತ್ನಾಳ್ ಸೇರಿದಂತೆ ರಾಜಕೀಯ ನಾಯಕರು ಸಾಥ್ ಕೊಟ್ಟರು.
Post a comment
Log in to write reviews