ರಸ್ತೆ ಕಾಮಗಾರಿ, ಭೂಸ್ವಾಧೀನ ವಿಚಾರದಲ್ಲಿ ಅಧಿಕಾರಿಗಳ ಎಡವಟ್ಟು; 20 ಕೋಟಿ ಠೇವಣಿಗೆ ಧಾರವಾಡ ಹೈಕೋರ್ಟ್ ಆದೇಶ

ಬೆಳಗಾವಿ: ರಸ್ತೆ ಕಾಮಗಾರಿ, ಭೂಸ್ವಾಧೀನ ವಿಚಾರದಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಬೆಳಗಾವಿಯ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮಹಾನಗರ ಪಾಲಿಕೆಗೆ ಭಾರೀ ನಷ್ಟವಾಗಿದ್ದು ಮಹಾ ಸಂಕಷ್ಟ ಎದುರಾಗಿದೆ. 20 ಕೋಟಿ ಪರಿಹಾರ ಮೊತ್ತ ಠೇವಣಿಗೆ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ.
2021ರಲ್ಲಿ ಬೆಳಗಾವಿಯ ಶಿವಾಜಿ ಗಾರ್ಡನ್ನಿಂದ ಓಲ್ಡ್ ಪಿಬಿ ರಸ್ತೆವರೆಗೆ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಾಮಗಾರಿ ನಡೆದಿತ್ತು. ಈ ವೇಳೆ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ಪರಿಹಾರ ನೀಡುವ ವಿಚಾರದಲ್ಲಿ ಅಂದಿನ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದರು. ಇದರಿಂದ ಭೂಮಿ ಕಳೆದುಕೊಂಡ ನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಇದೀಗ ಭೂಮಿ ಕಳೆದುಕೊಂಡವರಿಗೆ ಪರಿಹಾರಕ್ಕಾಗಿ ಠೇವಣಿ ಮೊತ್ತ ನೀಡಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಇನ್ನು ಧಾರವಾಡ ಹೈಕೋರ್ಟ್ ಆದೇಶ ಹಿನ್ನೆಲೆ ಬೆಳಗಾವಿ ಮಹಾನಗರ ಪಾಲಿಕೆ ತುರ್ತು ಸಭೆ ಕರೆದಿದೆ. 20ಕೋಟಿ ಪರಿಹಾರ ಮೊತ್ತ ಠೇವಣಿ ಇಟ್ಟರೆ ಪಾಲಿಕೆಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಲಿದೆ. ದುಡ್ಡು ಹೇಗೆ ಹೊಂದಿಸಬೇಕೆಂಬುವುದೇ ಬೆಳಗಾವಿ ಮಹಾನಗರ ಪಾಲಿಕೆಗೆ ಸವಾಲಾಗಿದೆ. ಸದ್ಯ ಎಲ್ಲರ ಚಿತ್ತ ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯತ್ತ ಇದೆ. ಇದೇ 27ರಂದು ಪಾಲಿಕೆ ಪರಿಷತ್ ಹಾಲಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಮಹತ್ವದ ಚರ್ಚೆಯಾಗಲಿದೆ. ಇದರ ಜೊತೆಗೆ ಇನ್ನೂ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ನ್ಯಾಯಾಂಗ ನಿಂದನೆ ತೂಗುಗತ್ತಿ ನೇತಾಡುತ್ತಿದೆ. ಪಾಲಿಕೆ ಅಧಿಕಾರಿಗಳ ನಡೆಯ ಬಗ್ಗೆ ಪಾಲಿಕೆ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews