ಚನ್ನಪಟ್ಟಣ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕೆ? ಕುತೂಹಲ ಕೆರಳಿಸಿದ ಹೆಚ್ಡಿಕೆ ನಡೆ
ರಾಮನಗರ : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಚನ್ನಪಟ್ಟಣ ಸಾಮ್ರಾಜ್ಯಾಧಿಪತಿಯಾಗೋಕೆ ಡಿಕೆ ಬ್ರದರ್ಸ್, ಕುಮಾರಸ್ವಾಮಿ ಮಧ್ಯೆ ಕಾಳಗ ಶುರುವಾಗಿದೆ.
ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಬ್ಬರು, ನಾನಾ ತಂತ್ರಗಾರಿಕೆಯನ್ನೇ ಮಾಡ್ತಿದ್ದಾರೆ. ಇದೀಗ ಚನ್ನಪಟ್ಟಣ ಅಖಾಡಕ್ಕೆ ಹೆಚ್ಡಿ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದು ಜೆಡಿಎಸ್ನಲ್ಲಿ ಭರ್ಜರಿ ತಯಾರಿ ಶುರುವಾಗಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೆಚ್ಚಿದೆ.
ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಹೆಚ್ ಡಿ ಕುಮಾರಸ್ವಾಮಿಯವರು ಸಭೆ ನಡೆಸಿದ್ದು ಈ ವೇಳೆ ನಿಖಿಲ್ ಸ್ಪರ್ಧೆಗೆ ಇಳಿಯುತ್ತಾರೆ ಎಂದು ಕೇಳಿ ಬಂದಿದೆ.
ಭಾನುವಾರ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿಖಿಲ್ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಬಹಿರಂಗವಾಗಿ ಒತ್ತಡ ಹಾಕಿದ್ರು. ಹೀಗಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಚರ್ಚೆ ಜೋರಾಗಿದೆ. ಮತ್ತೊಂದೆಡೆ HD ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಹೆಚ್ಡಿಕೆ, ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ರಾಧಾಮೋಹನ್ ದಾಸ್ ಅವರು ಕ್ಷೇತ್ರದ ವಿಚಾರದಲ್ಲಿ ಗೊಂದಲವಿಲ್ಲ ಎಂದಿದ್ದಾರೆ.
ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಮನವೊಲಿಕೆ ಬಗ್ಗೆ ಚರ್ಚೆ ನಡೆದಿದೆ. JDS, ಬಿಜೆಪಿ ಒಟ್ಟಾಗಿ ಹೋದರೆ ಮಾತ್ರ ಕಾಂಗ್ರೆಸ್ ಸೋಲಿಸಬಹುದು. ಇಲ್ಲವಾದರೆ ಮತ ವಿಭಜನೆಯಾಗಿ ಕಾಂಗ್ರೆಸ್ ಲಾಭ ಪಡೆಯುತ್ತದೆ. ಸಿ.ಪಿ.ಯೋಗೇಶ್ವರ್ ಮನವೊಲಿಸಲು H.D.ಕುಮಾರಸ್ವಾಮಿ ರಾಧಾಮೋಹನ್ ಅವರಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ನಡೆ ಕುತೂಹಲ ಮೂಡಿಸಿದೆ.
ಇನ್ನು ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ಮಾಡಿದ ಹೆಚ್ಡಿಕೆ, ದಲಿತಾಸ್ತ್ರವನ್ನೂ ಪ್ರಯೋಗಿಸಿದ್ರು, ದಲಿತ ಸಮುದಾಯದವರೇ ಕಾಂಗ್ರೆಸ್ನವರನ್ನ ನಂಬಬೇಡಿ, ಮೋಸಗಾರರು ಅಂದ್ರು. ಕುಮಾರಸ್ವಾಮಿಗೆ ಎರಡೆರಡೂ ಟೆನ್ಷನ್ ಇದೆ. ಎನ್ಡಿಎ ಅಭ್ಯರ್ಥಿಯ ಜೊತೆಗೆ ಮಗನ ರಾಜಕೀಯ ಭವಿಷ್ಯವೂ ಮುಖ್ಯ ಆಗಿದೆ. ಒಂದು ವೇಳೆ ಕ್ಷೇತ್ರ ಕೈ ತಪ್ಪಿದ್ರೆ ಚನ್ನಪಟ್ಟಣದಲ್ಲಿ ಹಿಡಿತ ಸಾಧಿಸೋಕೆ ಆಗಲ್ಲ, ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ನೇರಾ ನೇರ ಪೈಪೋಟಿ ಇರೋದ್ರಿಂದ ಸಿ.ಪಿ.ಯೋಗೇಶ್ವರ್ನ್ನೂ ಒಟ್ಟಾಗಿ ಕರೆದುಕೊಂಡು ಹೋಗೋದು ಸವಾಲು ಆಗಿದೆ.
Post a comment
Log in to write reviews