ರಾಮೇಶ್ವರಂ ಕೆಫೆ ಸ್ಫೋಟ ಆರೋಪಿಗಳ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸಿದ ಎನ್ಐಎ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಆರೋಪಿಗಳಿಬ್ಬರ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್ (ಪೂರಕ ಚಾರ್ಜ್‌ಶೀಟ್) ಸಲ್ಲಿಕೆ ಮಾಡಿದೆ.
ಈ ಚಾರ್ಜ್ಶೀಟ್ನಲ್ಲಿ ಗಭೀರ ಆರೋಪಗಳನ್ನು ಮಾಡಲಾಗಿದೆ ಆರೋಪಿಗಳಾದ (ಐಸಿಸ್ ಉಗ್ರರು) ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು ಮಸ್ಸಾವೀರ್ ಹುಸೇನ್ ಶಾಜಿಬ್ ವಿರುದ್ಧ ಈ ಹಿಂದೆಯೂ ಎನ್ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಚಾರ್ಜ್ಶೀಟ್ನಲ್ಲೇನಿದೆ?
ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು ಮಸ್ಸಾವೀರ್ ಹುಸೇನ್ ಮುಸ್ಲಿಂ ಯುವಕರನ್ನು ಮೂಲಭೂತವಾದಿ ಚಟುವಟಿಕೆಗಳಿಗೆ ಸೆಳೆಯುತ್ತಿದ್ದರಲ್ಲದೆ, ಪ್ರಚೋದನೆ ನೀಡುತ್ತಿದ್ದರು. ಭಯೋತ್ಪಾದಕರಿಗೆ ಹಣಕಾಸು ನೆರವನ್ನೂ ನೀಡುತ್ತಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
10 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಸಲ್ಲಿಸಿರುವ ಮೂರನೇ ಪೂರಕ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಇದಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ 10 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ.
ಆರಂಭದಲ್ಲಿ ಕರ್ನಾಟಕ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ನಂತರ 2022 ರ ನವೆಂಬರ್ನಲ್ಲಿ ಎನ್ಐಎ ತನಿಖೆ ಕೈಗೆತ್ತಿಕೊಂಡಿತ್ತು. ನಂತರ, ಘಟನೆಯು ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್/ಐಎಸ್ಐಎಸ್) ನ ಭಾರತ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ಅದು ತಿಳಿಸಿತ್ತು.
ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಸಂಚು
ಆರೋಪಿಗಳು ಭಯೋತ್ಪಾದನೆಯನ್ನು ಹರಡಲು ಮತ್ತು ರಾಷ್ಟ್ರವನ್ನು ಅಸ್ಥಿರಗೊಳಿಸುವ ಐಎಸ್ ಪಿತೂರಿಯ ಭಾಗವಾಗಿ ಮೂಲಭೂತವಾದಿ ಚಟುವಟಿಕೆಗಳು, ಭಯೋತ್ಪಾದನೆಗೆ ಯುವಕರನ್ನು ಸೆಳೆಯುವುದು, ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು, ಸ್ಫೋಟ ಕೃತ್ಯ ಎಸಗುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ದಹನದಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ತಿಳಿಸಿದೆ.
Poll (Public Option)

Post a comment
Log in to write reviews