ಹೊಸ ಅಪರಾಧ ಕಾನೂನು ಜಾರಿಮಾಡಿರೋದು ಶಿಕ್ಷಿಸಲು ಅಲ್ಲ, ನ್ಯಾಯಕ್ಕಾಗಿ: ಅಮಿತ್ ಶಾ ಸಮರ್ಥನೆ
ಹರಿಯಾಣ: ಹೊಸ ಮೂರು ಅಪರಾಧ ಕಾನೂನುಗಳು ಸಮಾಜದ ಎಲ್ಲ ಜನರಿಗೆ ನ್ಯಾಯ ನೀಡುವುದಾಗಿದೆ. ಯಾವುದೇ ವ್ಯಕ್ತಿಗೆ ಶಿಕ್ಷಿಸಲು ಜಾರಿ ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಚಂಡೀಗಢದಲ್ಲಿ ಇ-ಎವಿಡೆನ್ಸ್, ನ್ಯಾಯ ಸೇತು, ನ್ಯಾಯ ಶ್ರುತಿ ಮತ್ತು ಇ-ಸಮನ್ಸ್ ಸಿಸ್ಟಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 10 ವರ್ಷಗಳಲ್ಲಿ ಅತಿದೊಡ್ಡ ಬದಲಾವಣೆಗಳಲ್ಲಿ ಹೊಸ ಮೂರು ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಮಾಡಿದ್ದಾಗಿದೆ. ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸ್ವತಂತ್ರವಾಗಿರಬೇಕು. ಮತ್ತೊಂದು ದೇಶದ ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ನಾವು ಪಾಲನೆ ಮಾಡಿದಲ್ಲಿ, ಅದನ್ನು ಹೇಗೆ ಸ್ವತಂತ್ರ ರಾಷ್ಟ್ರ ಎಂದು ಪರಿಗಣಿಸಬೇಕು ಎಂದು ಬ್ರಿಟಿಷರ ಕಾಲದ ಕಾನೂನು ವ್ಯವಸ್ಥೆಯನ್ನು ಅಲ್ಲಗಳೆದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ)ಗಳು ಭಾರತೀಯರು ಆಯ್ಕೆ ಮಾಡಿಕೊಂಡ ಕಾನೂನುಗಳಾಗಿವೆ. ದೇಶದ ಸಂಸತ್ತಿನಲ್ಲಿ ಮಾಡಿದ ಕಾನೂನುಗಳು, ಇವುಗಳು ನ್ಯಾಯ ನೀಡುವ ಉದ್ದೇಶವನ್ನು ಹೊಂದಿವೆ. ಇದು ನ್ಯಾಯ ಸಂಹಿತೆ ಎಂದು ಗೃಹ ಸಚಿವರು ಬಣ್ಣಿಸಿದರು.
ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ನಂತರ ದೇಶವು ಅತ್ಯಂತ ಆಧುನಿಕ ಮತ್ತು ತಂತ್ರಜ್ಞಾನದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರವಾಗಲಿದೆ. ಇದಕ್ಕಾಗಿ ಗೃಹ ಸಚಿವಾಲಯವು ವಿವಿಧ ಹಂತಗಳಲ್ಲಿ ತರಬೇತಿ ಮತ್ತು ಕೌಶಲ್ಯಗಳನ್ನು ಬೆಳೆಸಲು ವ್ಯವಸ್ಥೆ ಮಾಡುತ್ತಿದೆ. ಹೀಗಾಗಿ ಯಾರಿಗೂ ಇವುಗಳಿಂದ ಅನ್ಯಾಯ ಆಗಲ್ಲ. ನಿಖರ ನ್ಯಾಯ ಸಿಗುತ್ತದೆ ಎಂದು ಹೇಳಿದರು.
Post a comment
Log in to write reviews