ನೇಪಾಳ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಸಾವಿನ ಸಂಖ್ಯೆ 102ಕ್ಕೇರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪೂರ್ವ ಮತ್ತು ಮಧ್ಯ ನೇಪಾಳದ ಪ್ರಮುಖ ಪ್ರದೇಶಗಳು ಜಲಾವೃತವಾಗಿದ್ದು, ದೇಶದ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಧಾನಿ ಕಠ್ಮಂಡು ಸೇರಿ ದೇಶದಾದ್ಯಂತ 48 ಜನರು ಸಾವನ್ನಪ್ಪಿದ್ದಾರೆ. 64 ಜನರು ನಾಪತ್ತೆಯಾಗಿದ್ದಾರೆ. 45 ಜನರು ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆ ಮಾಹಿತಿ ನೀಡಿದೆ.
ಕನಿಷ್ಠ 195 ಮನೆಗಳು ಮತ್ತು ಎಂಟು ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿ ಸುಮಾರು 3,100 ಜನರನ್ನು ರಕ್ಷಿಸಿದ್ದಾರೆ. ಕಳೆದ 40-45 ವರ್ಷಗಳಲ್ಲಿ ಕಠ್ಮಂಡುವಿನಲ್ಲಿ ಇಂತಹ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ ನೋಡಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಹೆದ್ದಾರಿಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ನೂರಾರು ಮನೆಗಳು ಮತ್ತು ಸೇತುವೆಗಳನ್ನು ಮಳೆ ನೀರು ಸುತ್ತುವರೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವ್ಯವಸ್ಥೆಯಿಂದ ಸಾವಿರಾರು ಜನರು ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಹವಾಮಾನ ಇಲಾಖೆ ಹೇಳಿದೆ.
Post a comment
Log in to write reviews