ಪರಿಷತ್‌ನ ಏಳು ಸ್ಥಾನಗಳಿಗೆ ಹೆಸರು ಅಂತಿಮ: ಯತೀಂದ್ರ ಸಿದ್ದರಾಮಯ್ಯರಿಗೆ ಟಿಕೆಟ್ ಫಿಕ್ಸ್
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ಆಯ್ಕೆ ಸಂಬಂಧ ಕಾಂಗ್ರೆಸ್ ನ ಏಳು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಸಿಗುವುದು ಖಾತ್ರಿಯಾಗಿದೆ.
ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿಎಂ ಹಾಗೂ ಡಿಸಿಎಂ ಅವರು ಈಗಾಗಲೇ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆಯ ಒಳಗಾಗಿ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ ರಾಜ್ಯದಿಂದ ಅಂತಿಮವಾದ ಪಟ್ಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವಿರೋಧ ಅಭ್ಯರ್ಥಿಯಾಗಿದ್ದಾರೆ ಎನ್ನಲಾಗಿದೆ. ಯತೀಂದ್ರ ಅವರ ಉಮೇದುವಾರಿಕೆಯನ್ನು ಗುರುವಾರ ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹೈಕಮಾಂಡ್ ಅನುಮೋದಿಸಿದೆ. ಉಳಿದ ಆರು ಸ್ಥಾನಗಳಿಗೆ ಪೈಪೋಟಿ ಇದ್ದು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ.
ಹೈಕಮಾಂಡ್ ಜತೆಗೆ ಸಾಕಷ್ಟು ಚರ್ಚೆ ಬಳಿಕ 65 ಜನರ ಹೆಸರನ್ನು ಅಂತಿಮಗೊಳಿಸಿ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಈ ಪಟ್ಟಿಯನ್ನೇ ದಿಲ್ಲಿ ನಾಯಕರಿಗೆ ಸಲ್ಲಿಸಲಾಗಿದೆ. ಡಾ. ಯತೀಂದ್ರ ವಿಚಾರದಲ್ಲಿ ಈಗಾಗಲೇ ಮಾತು ಕೊಟ್ಟಿರುವ ಹೈಕಮಾಂಡ್ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಕರಾವಳಿ, ಮಧ್ಯ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಿಂದ ಅನೇಕ ಆಕಾಂಕ್ಷಿಗಳಿದ್ದು, ಮಂಗಳೂರಿಂದ 21 ಮಂದಿ ಮತ್ತು ಚಿಕ್ಕಮಗಳೂರಿಂದ 9 ಮಂದಿ ಆಕಾಂಕ್ಷಿಗಳಿದ್ದು ಯಾರಿಗೆ ಅದೃಷ್ಠ ಒಲಿಯಲಿದೆ ಎಂಬುದು ಪಟ್ಟಿ ಬಿಡುಗಡೆಯ ನಂತರ ತಿಳಿಯಲಿದೆ.
Post a comment
Log in to write reviews