ಟೌಂಗೂ (ಮ್ಯಾನ್ಮಾರ್): ಮ್ಯಾನ್ಮಾರ್‌ನ ಜುಂಟಾ ಮುಖ್ಯಸ್ಥರು ಇಲ್ಲಿನ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಶನಿವಾರ ವಿದೇಶಿ ನೆರವಿಗಾಗಿ ಮನವಿ ಮಾಡಿದ್ದಾರೆ. "ಪ್ರವಾಹ ಸಂತ್ರಸ್ತರಿಗೆ ರಕ್ಷಣಾ ಮತ್ತು ಪರಿಹಾರ ಸಹಾಯವನ್ನು ಪಡೆಯಲು ಸರ್ಕಾರದ ಅಧಿಕಾರಿಗಳು ವಿದೇಶಗಳನ್ನು ಸಂಪರ್ಕಿಸಬೇಕಾಗಿದೆ. ರಕ್ಷಣಾ, ಪರಿಹಾರ ಮತ್ತು ಪುನರ್ವಸತಿಯನ್ನು ಸಾಧ್ಯವಾದಷ್ಟು ಬೇಗ ಕಲ್ಪಿಸಬೇಕಾದ ಅನಿರ್ವಾಯತೆ ಇದೆ. ಮ್ಯಾನ್ಮಾರ್ ಮಿಲಿಟರಿ ಈ ಹಿಂದೆ ವಿದೇಶದಿಂದ ಮಾನವೀಯ ನೆರವನ್ನು ತಿರಸ್ಕರಿಸಿತ್ತು, ಇದು ನಿರಾಶೆ ತಂದಿದೆ" ಎಂದು ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಹೇಳಿದ್ದಾರೆ.
ಗಾಯದ ಮೇಲೆ ಬರೆ ಎಳೆದ ಟೈಫೂನ್ ಯಾಗಿ: ಟೈಫೂನ್ ಯಾಗಿ ಚಂಡಮಾರುತ ಅಪ್ಪಳಿಸಿದ್ದರಿಂದ ಕಳೆದ ವಾರಾಂತ್ಯದಲ್ಲಿ ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ಮತ್ತು ಥಾಯ್ಲೆಂಡ್ನಲ್ಲಿ ಪ್ರವಾಹಗಳು ಮತ್ತು ಭೂಕುಸಿತ ಸಂಭವಿಸಿ ಸುಮಾರು 300 ಜನರು ಮೃತಪಟ್ಟಿದ್ದಾರೆ. ಮ್ಯಾನ್ಮಾರ್‌ನಲ್ಲಿ 2,35,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಜುಂಟಾ ಹೇಳಿದೆ. 2021ರಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ದೇಶದಲ್ಲಿ ಆಂತರಿಕ ಯುದ್ಧ ಉಲ್ಬಣಗೊಂಡಿತ್ತು. ಇದರ ನಡುವೆ ಚಂಡಮಾರುತ ಅಪ್ಪಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜಧಾನಿ ನೇಪಿಡಾವ್‌ನ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿರುವ ಟೌಂಗೂದಲ್ಲಿ ಸ್ಥಳೀಯರು ಬೌದ್ಧ ಪಗೋಡಾದ ಸುತ್ತಲೂ ಪ್ರವಾಹದ ನೀರಿನಲ್ಲಿ ತಾತ್ಕಾಲಿಕ ತೆಪ್ಪಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂತು. ರಕ್ಷಣಾ ಸಿಬ್ಬಂದಿ ಸ್ಪೀಡ್ ಬೋಟ್ ಸಹಾಯದಿಂದ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುತ್ತಿದ್ದಾರೆ.
ಜನರು, ಪ್ರಾಣಿಗಳ ಜೀವಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ: "ನಾನು ಅಕ್ಕಿ, ಕೋಳಿಗಳು ಮತ್ತು ಬಾತುಕೋಳಿಗಳನ್ನು ಕಳೆದುಕೊಂಡಿದ್ದೇನೆ. ತಮ್ಮ ಹಳ್ಳಿಯಲ್ಲಿ ಪ್ರವಾಹದ ನಂತರ ಟೌಂಗೂ ಬಳಿಯ ಎತ್ತರದ ಪ್ರದೇಶಕ್ಕೆ ತನ್ನ ಮೂರು ಹಸುಗಳನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರಿಸಿದರು. ನಾನು ಇತರ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜನರು ಮತ್ತು ಪ್ರಾಣಿಗಳ ಜೀವಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ" ಎಂದು ರೈತ ನೌಂಗ್ ತುನ್ ಹೇಳಿದರು.
ಟೈಫೂನ್ ಯಾಗಿ ಚಂಡಮಾರುತ ಆಗ್ನೇಯ ಏಷ್ಯಾದಾದ್ಯಂತ ಜನರನ್ನು ತಮ್ಮ ನಿವಾಸಗಳಿಂದ ಸ್ಥಳಾಂತರಗೊಳ್ಳುವಂತೆ ಮಾಡಿದೆ. ಜುಂಟಾ ನಿನ್ನೆ(ಶುಕ್ರವಾರ) 33 ಜನ ಮೃತಪಟ್ಟಿರುವುದಾಗಿ ತಿಳಿಸಿತ್ತು. ಆದರೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ 36 ಶವಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಯೆಟ್ನಾಂ ಅಧಿಕಾರಿಗಳು 262 ಜನರು ಸಾವನ್ನಪ್ಪಿದ್ದಾರೆ ಮತ್ತು 83 ಜನರು ನಾಪತ್ತೆಯಾಗಿದ್ದಾರೆ ಎಂದು ಶನಿವಾರ ಮಾಹಿತಿ ನೀಡಿದ್ದಾರೆ.
Post a comment
Log in to write reviews